ದೇವರು ಕೊಡುವ ಸರ್ವಾಯುಧಗಳು
10 ಕೊನೆಯದಾಗಿ, ಕರ್ತನಲ್ಲಿಯೂ ಅವರ ಪರಾಕ್ರಮ ಶಕ್ತಿಯಲ್ಲಿಯೂ ಬಲಗೊಳ್ಳಿರಿ. 11 ನೀವು ಪಿಶಾಚನ ತಂತ್ರಗಳನ್ನು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. 12 ಏಕೆಂದರೆ, ನಾವು ಹೋರಾಡುವುದು ನರಮಾನವರೊಂದಿಗಲ್ಲ, ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಗಳ ಮೇಲೆಯೂ ಆಗಿದೆ. 13 ಆದುದರಿಂದ ವೈರಿಯು ದಾಳಿಮಾಡುವ ದಿನವು ಬರುವಾಗ ನೀವು ಅವನನ್ನು ಎದುರಿಸಿ ನಿಲ್ಲುವಂತೆಯು, ಎಲ್ಲವನ್ನು ಜಯಿಸಿ ಮುಗಿಸಿದ ಮೇಲೆ ನಿಲ್ಲಲು ಶಕ್ತರಾಗುವಂತೆ, ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. 14 ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು, ನೀತಿಯೆಂಬ ಕವಚವನ್ನು ಧರಿಸಿಕೊಳ್ಳಿರಿ. 15 ಸಮಾಧಾನದ ಸುವಾರ್ತೆಯ ಸಿದ್ಧತೆಯೆಂಬ ಪಾದರಕ್ಷೆಗಳನ್ನು ಮೆಟ್ಟಿಕೊಂಡು ನಿಲ್ಲಿರಿ. 16 ಇವೆಲ್ಲವುಗಳೊಂದಿಗೆ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಈ ಗುರಾಣಿಯಿಂದಲೇ, ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ. 17 ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿರಿ. ದೇವರ ವಾಕ್ಯವೆಂಬ ಪವಿತ್ರಾತ್ಮರ ಖಡ್ಗವನ್ನು ಎತ್ತಿ ಹಿಡಿಯಿರಿ.
18 ನೀವು ಪವಿತ್ರಾತ್ಮ ದೇವರಲ್ಲಿ ಎಲ್ಲಾ ಸಮಯಗಳಲ್ಲಿಯೂ ಸಕಲ ವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಕರ್ತನ ಜನರೆಲ್ಲರಿಗಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರವಾಗಿರಿ.