ಪೂರಿಮ್ ಹಬ್ಬ
20 ಮೊರ್ದೆಕೈಯು ಈ ಘಟನೆಗಳನ್ನು ಬರೆದು ಅರಸನಾದ ಅಹಷ್ವೇರೋಷನ ಸಕಲ ಪ್ರಾಂತಗಳಲ್ಲಿ ಸಮೀಪದಲ್ಲಿಯೂ ದೂರದಲ್ಲಿಯೂ ಇದ್ದ ಯೆಹೂದ್ಯರು ಎಲ್ಲರಿಗೂ ಪತ್ರಗಳ ಮುಖಾಂತರ ಕಳುಹಿಸಿದನು. 21 ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆ ಮತ್ತು ಹದಿನೈದನೆ ದಿನಗಳನ್ನೂ ಪ್ರತಿವರ್ಷ ಹಬ್ಬದ ದಿನಗಳಾಗಿ ಆಚರಿಸುವುದು ಶಾಶ್ವತ ನಿಯಮವೆಂದು ಭಾವಿಸುವಂತೆ ಆ ಪತ್ರದಲ್ಲಿ ಬರೆಯಲಾಗಿತ್ತು. 22 ಆ ದಿನಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳ ಕಾಟದಿಂದ ವಿಶ್ರಾಂತಿ ಪಡೆದ ಕಾಲವಾಗಿಯೂ, ಅವರ ದುಃಖ ಸಂತೋಷವೂ, ಗೋಳಾಟ ಉತ್ಸವವೂ ಬದಲಾದ ದಿನವಾಗಿಯೂ ಕೊಂಡಾಡುವಂತೆ ಆ ಪತ್ರದಲ್ಲಿ ಬರೆದಿತ್ತು. ಆದ್ದರಿಂದ ಆ ದಿನ ಸಂಭ್ರಮದ ದಿನವಾಗಿಯೂ, ಒಬ್ಬರಿಗೊಬ್ಬರು ಭೋಜನ ಕೊಡುಗೆಗಳನ್ನು ಕಳುಹಿಸುವ ದಿನವಾಗಿಯೂ, ಬಡವರಿಗೆ ದಾನಗಳನ್ನು ಮಾಡುವ ದಿನವಾಗಿಯೂ ಪಾಲಿಸಬೇಕೆಂದೂ ಆ ಪತ್ರದಲ್ಲಿ ಬರೆದಿತ್ತು.
23 ಆದ್ದರಿಂದ ಯೆಹೂದ್ಯರು ಮೊರ್ದೆಕೈಯು ತಮಗೆ ಬರೆದ ಪ್ರಕಾರವಾಗಿ, ತಾವು ಆರಂಭಮಾಡಿದ್ದ ಸಂಭ್ರಮವನ್ನು ಮುಂದುವರಿಸಲು ಒಪ್ಪಿಕೊಂಡರು. 24 ಏಕೆಂದರೆ ಸಮಸ್ತ ಯೆಹೂದ್ಯರಿಗೂ ಕಡು ವೈರಿಯಾದ, ಅಗಾಗನ ವಂಶದ, ಹಮ್ಮೆದಾತನ ಮಗನಾದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ತೀರ್ಮಾನಿಸಿಕೊಂಡು ಅವರನ್ನು ಹಾಳುಮಾಡಲು, ನಿರ್ನಾಮಗೊಳಿಸಲು ಪೂರ್ ಅಂದರೆ, ಚೀಟನ್ನು ಹಾಕಿದ್ದನು. 25 ಆದರೆ ಈ ಒಳಸಂಚು ಅರಸನಿಗೆ ತಿಳಿದುಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವಂತೆ ಅರಸನು ಆಜ್ಞೆಯನ್ನು ಹೊರಡಿಸಿದನು. ಅದರೊಂದಿಗೆ ಅವನ ಮಕ್ಕಳನ್ನೂ ಗಲ್ಲಿಗೇರಿಸಲು ಅರಸನು ಆಜ್ಞಾಪಿಸಿದ್ದನು; 26 ಆದ್ದರಿಂದ ಪೂರ್ ಎಂಬ ಪದದ ಆಧಾರದ ಮೇಲೆ ಆ ದಿನಗಳಿಗೆ ಪೂರಿಮ್ ಎಂಬ ಹೆಸರಾಯಿತು. ಅರಸನು ಪತ್ರದಲ್ಲಿ ಬರೆದ ಎಲ್ಲಾ ಮಾತುಗಳನ್ನೂ, ಅವುಗಳ ಸಂಬಂಧವಾಗಿ ತಾವು ಅನುಭವಿಸಿದ್ದನ್ನೂ, ತಮಗೆ ಸಂಭವಿಸಿದ್ದನ್ನೂ 27 ಯೆಹೂದ್ಯರು ಸ್ಮರಿಸಿಕೊಂಡು ಪ್ರತಿವರ್ಷವೂ ಆ ಎರಡು ದಿನಗಳನ್ನು, ಅವುಗಳಿಗೆ ಸಂಬಂಧಪಟ್ಟ ಶಾಸನದ ಪ್ರಕಾರ, ನಿಯಮಿತ ಕಾಲದಲ್ಲಿ ಆಚರಿಸುವಂತೆ ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಯಾವ ವಿಧದಲ್ಲಿಯೂ ಮೀರಕೂಡದ ಪದ್ಧತಿಯನ್ನಾಗಿ ಪಾಲಿಸಲು ತೀರ್ಮಾನಿಸಿದರು. 28 ಇದಲ್ಲದೆ ಈ ಎರಡು ದಿನಗಳನ್ನು ಪ್ರತಿ ಪ್ರಾಂತದಲ್ಲಿಯೂ ಪ್ರತಿ ಪಟ್ಟಣದಲ್ಲಿಯೂ, ಪ್ರತಿ ತಲೆಮಾರಿನಲ್ಲಿಯೂ, ಪ್ರತಿ ಕುಟುಂಬದಲ್ಲಿಯೂ ಸ್ಮರಿಸಿ ಆಚರಿಸಬೇಕು. ಈ ಪೂರಿಮ್ ದಿನಗಳು ಯೆಹೂದ್ಯರಲ್ಲಿ ಎಂದಿಗೂ ನಿಂತುಹೋಗಬಾರದು. ಅವರ ಸಂತಾನದವರಲ್ಲಿ ಅವುಗಳ ಜ್ಞಾಪಕವು ಅಳಿದು ಹೋಗಬಾರದು ಎಂದೂ ತೀರ್ಮಾನಿಸಿಕೊಂಡರು.
29 ಆಗ ಅಬೀಹೈಲನ ಮಗಳಾದ ಎಸ್ತೇರ್ ರಾಣಿಯೂ, ಈ ಪೂರಿಮ್ ದಿನವನ್ನು ಸ್ಥಿರಪಡಿಸುವುದಕ್ಕಾಗಿ ಯೆಹೂದ್ಯನಾದ ಮೊರ್ದೆಕೈಯ ಸಹಾಯದಿಂದ ಎರಡನೆಯ ಪತ್ರವನ್ನು ಪೂರ್ಣ ಅಧಿಕಾರದಿಂದ ಬರೆದಳು. 30 ಮೊರ್ದೆಕೈಯೂ ದಯೆ ಹಾಗೂ ಭರವಸೆಯ ಮಾತುಗಳಿಂದ ಅಹಷ್ವೇರೋಷನ ರಾಜ್ಯದ ನೂರ ಇಪ್ಪತ್ತೇಳು ಪ್ರಾಂತಗಳಲ್ಲಿರುವ ಸಮಸ್ತ ಯೆಹೂದ್ಯರಿಗೆ ಪತ್ರಗಳನ್ನು ಕಳುಹಿಸಿದನು. 31 ಇದಲ್ಲದೆ ಈ ಪೂರಿಮ್ ದಿನಗಳನ್ನು ಯೆಹೂದ್ಯನಾದ ಮೊರ್ದೆಕೈಯೂ ರಾಣಿಯಾದ ಎಸ್ತೇರಳೂ ಎಲ್ಲಾ ಯೆಹೂದ್ಯರಿಗೂ, ಅವರ ಸಂತಾನದವರಿಗೂ ಉಪವಾಸ ಮಾಡಿ, ದುಃಖಿಸುವ ಕಾಲವನ್ನು ಸ್ಥಿರಪಡಿಸಿದ ಪ್ರಕಾರವೇ ಈ ಪೂರಿಮ್ ದಿನವನ್ನು ಸ್ಥಿರಪಡಿಸುವುವಂತೆ ಆಜ್ಞಾಪಿಸಿದ್ದರು. 32 ಹೀಗೆಯೇ ಎಸ್ತೇರಳ ಆಜ್ಞೆಯು ಈ ಪೂರಿಮ್ ದಿವಸಗಳ ಕಾರ್ಯಗಳನ್ನು ಸ್ಥಿರಪಡಿಸಿದ್ದರಿಂದ ಅದು ಗ್ರಂಥದಲ್ಲಿ ಬರೆಯಲಾಯಿತು.