ಮೋಶೆಯ ಜನನ ಮತ್ತು ಬಾಲ್ಯ
1 ಈ ಸಮಯದಲ್ಲಿ ಲೇವಿಯ ವಂಶದವನಾದ ಒಬ್ಬನು ಲೇವಿಯ ಸ್ತ್ರೀಯನ್ನು ಮದುವೆಯಾದನು. 2 ಆ ಸ್ತ್ರೀಯು ಗರ್ಭಧರಿಸಿ, ಗಂಡು ಮಗುವನ್ನು ಹೆತ್ತಳು. ಅದು ಸುಂದರವಾಗಿದ್ದುದರಿಂದ ಮೂರು ತಿಂಗಳು ಬಚ್ಚಿಟ್ಟರು. 3 ಆದರೆ ಅದನ್ನು ಹೆಚ್ಚುಕಾಲ ಬಚ್ಚಿಡುವುದಕ್ಕಾಗದೆ ಇದ್ದಾಗ, ಅವನಿಗಾಗಿ ಆಪಿನ ಪೆಟ್ಟಿಗೆಯನ್ನು ತೆಗೆದುಕೊಂಡು, ಜೇಡಿಮಣ್ಣನ್ನು ಮತ್ತು ರಾಳವನ್ನು ಹಚ್ಚಿ, ಕೂಸನ್ನು ಅದರಲ್ಲಿಟ್ಟು, ನೈಲ್ ನದಿಯ ಅಂಚಿನಲ್ಲಿ ಇದ್ದ ಜಂಬು ಹುಲ್ಲಿನಲ್ಲಿ ಇಟ್ಟರು. 4 ಕೂಸಿಗೆ ಏನಾಗುವುದೋ ಎಂದು ತಿಳಿದುಕೊಳ್ಳುವುದಕ್ಕೆ ದೂರದಲ್ಲಿ ಅದರ ಅಕ್ಕ ನಿಂತುಕೊಂಡಳು.
5 ಆಗ ಫರೋಹನ ಮಗಳು ನೈಲ್ ನದಿಯಲ್ಲಿ ಸ್ನಾನ ಮಾಡುವದಕ್ಕೆ ಬಂದಳು. ಆಕೆಯ ದಾಸಿಯರು ನದಿಯ ಅಂಚಿನಲ್ಲಿ ತಿರುಗಾಡುತ್ತಿದ್ದರು. ಫರೋಹನ ಮಗಳು ಜಂಬು ಹುಲ್ಲಿನಲ್ಲಿದ್ದ ಪೆಟ್ಟಿಗೆಯನ್ನು ನೋಡಿ ತನ್ನ ದಾಸಿಯನ್ನು ಕಳುಹಿಸಿ, ಅದನ್ನು ತರಿಸಿದಳು. 6 ಆ ಪೆಟ್ಟಿಗೆಯನ್ನು ತೆರೆದಾಗ, ಕೂಸನ್ನು ನೋಡಿದಳು. ಕೂಸು ಅಳುತ್ತಿತ್ತು. ಆಕೆಗೆ ಅದರ ಮೇಲೆ ಕನಿಕರ ಹುಟ್ಟಿತು. ಅವಳು, "ಇದು ಹಿಬ್ರಿಯರ ಮಕ್ಕಳಲ್ಲಿ ಒಂದಾಗಿರಬೇಕು," ಎಂದು ಹೇಳಿದಳು.
7 ಆಗ ಮಗುವಿನ ಅಕ್ಕ ಫರೋಹನ ಮಗಳಿಗೆ, "ನಾನು ಹೋಗಿ ಈ ಕೂಸಿಗೆ ಹಾಲು ಕೊಟ್ಟು ಸಾಕುವುದಕ್ಕೆ ಹಿಬ್ರಿಯ ಸ್ತ್ರೀಯರಿಂದ ಒಬ್ಬ ದಾದಿಯನ್ನು ನಿನಗೋಸ್ಕರ ಕರೆದುಕೊಂಡು ಬರಲೋ?" ಎಂದಳು.
8 ಫರೋಹನ ಮಗಳು ಆಕೆಗೆ, "ಹೌದು, ಹೋಗು," ಎಂದಳು. ಆಗ ಆ ಹುಡುಗಿಯು ಹೋಗಿ ಕೂಸಿನ ತಾಯಿಯನ್ನೇ ಕರೆದುಕೊಂಡು ಬಂದಳು. 9 ಫರೋಹನ ಮಗಳು ಆಕೆಗೆ, "ಈ ಮಗುವನ್ನು ತೆಗೆದುಕೊಂಡುಹೋಗಿ, ನನಗೋಸ್ಕರ ಸಾಕು. ನಾನು ನಿನಗೆ ಸಂಬಳವನ್ನು ಕೊಡುವೆನು," ಎಂದಳು. ಆಗ ಆ ಸ್ತ್ರೀಯು ಕೂಸನ್ನು ತೆಗೆದುಕೊಂಡುಹೋಗಿ ಸಾಕಿದಳು. 10 ಆ ಮಗುವು ಬೆಳೆದಾಗ, ಅವನನ್ನು ಫರೋಹನ ಮಗಳ ಬಳಿಗೆ ತೆಗೆದುಕೊಂಡು ಹೋದಳು. ಅವನು ಆಕೆಗೆ ಮಗನಾದನು. ಆಕೆಯು, "ನೀರಿನೊಳಗಿಂದ ಇವನನ್ನು ಎಳೆದೆ," ಎಂದು ಹೇಳಿ ಅವನಿಗೆ "ಮೋಶೆ" ಎಂದು ಹೆಸರಿಟ್ಟಳು.