ಗೊಣಗುಟ್ಟದೆ ಎಲ್ಲವನ್ನೂ ಮಾಡಿರಿ
12 ಹೀಗಿರುವಲ್ಲಿ ನನ್ನ ಪ್ರಿಯ ಸ್ನೇಹಿತರೇ, ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ನೀವು ಯಾವಾಗಲೂ ನನಗೆ ವಿಧೇಯರಾದಂತೆ ಈಗಲೂ ವಿಧೇಯರಾಗಿ, ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ರಕ್ಷಣೆಯನ್ನು ಕಾರ್ಯರೂಪಕ್ಕೆ ತನ್ನಿರಿ. 13 ಏಕೆಂದರೆ, ತಮ್ಮ ಸದುದ್ದೇಶವನ್ನು ನೆರವೇರಿಸುವಂತೆ ನಿಮ್ಮಲ್ಲಿ ಬಯಕೆಯನ್ನೂ ಕಾರ್ಯಸಾಧನೆಯನ್ನೂ ನಿರ್ಮಿಸುವವರು ದೇವರೇ.
14 ಗೊಣಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನೂ ಮಾಡಿರಿ. 15 ಹೀಗೆ ನೀವು ನಿಂದಾರಹಿತರೂ ದೋಷವಿಲ್ಲದವರೂ, "ನಿಷ್ಕಳಂಕರಾದ ದೇವರ ಮಕ್ಕಳಾಗಿ, ವಕ್ರವಾದ ದುಷ್ಟ ಜನಾಂಗದ ಮಧ್ಯದಲ್ಲಿ,"2:15 ಧರ್ಮೋ 32:5 ಜೀವವಾಕ್ಯವನ್ನು ಹಿಡಿದುಕೊಂಡು, ಲೋಕದಲ್ಲಿ ನಕ್ಷತ್ರಗಳಂತೆ ಹೊಳೆಯುವವರಾಗಿರುವಿರಿ. 16 ನೀವು ಜೀವವಾಕ್ಯವನ್ನು ಹಿಡಿದವರಾಗಿದ್ದರೆ, ಹೀಗೆ ನಾನು ಓಡಿದ ಓಟವೂ ಪ್ರಯಾಸವೂ ವ್ಯರ್ಥವಾಗಲಿಲ್ಲವೆಂದು ತಿಳಿದು ಕ್ರಿಸ್ತನ ಪುನರಾಗಮನ ದಿನದಲ್ಲಿ ಅಭಿಮಾನ ಪಡುವೆನು.