ಪೌಲನು ಪೇತ್ರನನ್ನು ಎದುರಿಸಿದ್ದು
11 ಕೇಫನು ಅಂತಿಯೋಕ್ಯ ಎಂಬ ಪಟ್ಟಣಕ್ಕೆ ಬಂದಾಗ ಅವನು ತಪ್ಪುಮಾಡಿದವನಾಗಿ ಇದ್ದುದರಿಂದ, ನಾನು ಅವನನ್ನು ಬಹಿರಂಗವಾಗಿ2:11 ಅಥವಾ ಮುಖಾಮುಖಿಯಾಗಿ ಎದುರಿಸಿದೆನು. 12 ಏಕೆಂದರೆ ಯಾಕೋಬನ ಕಡೆಯಿಂದ ಕೆಲವರು ಬರುವುದಕ್ಕೆ ಮುಂಚೆ ಪೇತ್ರನು ಯೆಹೂದ್ಯರಲ್ಲದವರೊಡನೆ ಊಟಮಾಡುತ್ತಿದ್ದನು. ಅವರು ಬಂದ ಮೇಲೆ ಯೆಹೂದ್ಯರಿಗೆ ಅವನು ಭಯಪಟ್ಟು ಯೆಹೂದ್ಯರಲ್ಲದವರಿಂದ ತನ್ನನ್ನು ಪ್ರತ್ಯೇಕಿಸಿಕೊಂಡನು. 13 ಇದಲ್ಲದೆ ಮಿಕ್ಕಾದ ಯೆಹೂದ್ಯರೂ ಅವನೊಂದಿಗೆ ಸೇರಿ ಕಪಟಮಾಡಿದರು. ಹೀಗೆ ಬಾರ್ನಬನೂ ಅವರ ಕಪಟದ ಸೆಳವಿಗೆ ಒಳಗಾದನು.
14 ಆದರೆ ಅವರು ಸುವಾರ್ತೆಯ ಸತ್ಯದ ಪ್ರಕಾರ ನೆಟ್ಟಗೆ ನಡೆಯಲಿಲ್ಲವೆಂದು ನಾನು ಕಂಡಾಗ ಎಲ್ಲರ ಮುಂದೆ ಪೇತ್ರನಿಗೆ, "ನೀನು ಯೆಹೂದ್ಯನಾಗಿದ್ದು, ಯೆಹೂದ್ಯರಂತೆ ಜೀವಿಸದೆ ಯೆಹೂದ್ಯರಲ್ಲದವರಂತೆ ಜೀವಿಸಿ, ಯೆಹೂದ್ಯರಲ್ಲದವರು ಯೆಹೂದ್ಯರಂತೆ ಜೀವಿಸಬೇಕೆಂದು ನೀನು ಒತ್ತಾಯ ಮಾಡುವುದು ಹೇಗೆ?" ಎಂದು ಕೇಳಿದೆ.