ಅಬ್ರಹಾಮನಿಗೆ ಪರೀಕ್ಷೆ
1 ಕೆಲವು ಕಾಲದ ನಂತರ, ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕಾಗಿ ಅವನಿಗೆ, "ಅಬ್ರಹಾಮನೇ," ಎಂದು ಕರೆದರು.
ಅದಕ್ಕವನು, "ಇಗೋ, ಇಲ್ಲಿದ್ದೇನೆ," ಎಂದು ಉತ್ತರಕೊಟ್ಟನು.
2 ಆಗ ದೇವರು, "ನೀನು ಪ್ರೀತಿ ಮಾಡುವ ನಿನ್ನ ಒಬ್ಬನೇ ಮಗ ಇಸಾಕನನ್ನು ಈಗ ತೆಗೆದುಕೊಂಡು, ಮೊರೀಯಾ ದೇಶಕ್ಕೆ ಹೋಗಿ, ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು," ಎಂದರು.
3 ಅಬ್ರಹಾಮನು ಬೆಳಿಗ್ಗೆ ಎದ್ದು, ತನ್ನ ಕತ್ತೆಗೆ ತಡಿ ಕಟ್ಟಿ, ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗ ಇಸಾಕನನ್ನೂ, ದಹನಬಲಿಗಳಿಗಾಗಿ ಕಟ್ಟಿಗೆಗಳನ್ನೂ ತೆಗೆದುಕೊಂಡು, ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು. 4 ಮೂರನೆಯ ದಿನ ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಆ ಸ್ಥಳವು ದೂರದಲ್ಲಿ ಕಾಣಿಸಿತು. 5 ಅಬ್ರಹಾಮನು ತನ್ನ ಸೇವಕರಿಗೆ, "ಕತ್ತೆಯ ಸಂಗಡ ಇಲ್ಲಿಯೇ ಇರಿ. ನಾನೂ, ಹುಡುಗನೂ ಅಲ್ಲಿಗೆ ಹೋಗಿ, ಆರಾಧನೆ ಮಾಡಿ, ನಿಮ್ಮ ಬಳಿಗೆ ಹಿಂದಿರುಗಿ ಬರುತ್ತೇವೆ," ಎಂದನು.
6 ಅಬ್ರಹಾಮನು ದಹನಬಲಿಗಳ ಕಟ್ಟಿಗೆಗಳನ್ನು ತೆಗೆದುಕೊಂಡು, ತನ್ನ ಮಗ ಇಸಾಕನ ಮೇಲೆ ಹೊರಿಸಿ; ಬೆಂಕಿಯನ್ನೂ, ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡನು. ಅವರಿಬ್ಬರೂ ಹೊರಟು ಹೋದರು. 7 ಇಸಾಕನು ತನ್ನ ತಂದೆ ಅಬ್ರಹಾಮನಿಗೆ, "ಅಪ್ಪಾ," ಎಂದನು.
ಆಗ ಅಬ್ರಹಾಮನು, "ಏನು ಮಗನೇ?" ಎಂದನು.
ಅದಕ್ಕೆ ಅವನು, "ಇಗೋ, ಬೆಂಕಿಯೂ, ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ?" ಎಂದನು.
8 ಅಬ್ರಹಾಮನು, "ನನ್ನ ಮಗನೇ, ದೇವರೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿಸುವರು," ಎಂದು ಉತ್ತರಕೊಟ್ಟನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು.
9 ದೇವರು ಅವನಿಗೆ ಹೇಳಿದ ಸ್ಥಳಕ್ಕೆ ಬಂದಾಗ, ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ, ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ, ತನ್ನ ಮಗ ಇಸಾಕನನ್ನು ಕಟ್ಟಿ, ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು. 10 ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವುದಕ್ಕೆ ಕತ್ತಿ ತೆಗೆದುಕೊಂಡನು. 11 ಆಗ ಯೆಹೋವ ದೇವರ ದೂತನು ಆಕಾಶದೊಳಗಿಂದ, "ಅಬ್ರಹಾಮನೇ, ಅಬ್ರಹಾಮನೇ," ಎಂದು ಅವನನ್ನು ಕರೆದನು.
ಅವನು, "ಇಲ್ಲಿ ಇದ್ದೇನೆ," ಎಂದನು.
12 ಯೆಹೋವ ದೇವರ ದೂತನು ಅಬ್ರಹಾಮನಿಗೆ, "ಹುಡುಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ; ಏಕೆಂದರೆ ನೀನು ದೇವರಿಗೆ ಭಯಪಡುತ್ತೀ ಎಂದು ಈಗ ನಾನು ತಿಳಿದಿದ್ದೇನೆ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವುದಕ್ಕೆ ಹಿಂಜರಿಯಲಿಲ್ಲ," ಎಂದು ಹೇಳಿದನು.