3 ಆ ಯಜ್ಞಗಳು ಪ್ರತಿವರ್ಷವೂ ಪಾಪಗಳ ಜ್ಞಾಪಕವನ್ನು ಉಂಟುಮಾಡುತ್ತಿತ್ತು. 4 ಏಕೆಂದರೆ ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದುಹಾಕುವುದು ಅಸಾಧ್ಯ.
5 ಆದ್ದರಿಂದ ಕ್ರಿಸ್ತ ಯೇಸು ಭೂಲೋಕದೊಳಗೆ ಬಂದಾಗ,
"ಯಜ್ಞ ಮತ್ತು ಅರ್ಪಣೆಯನ್ನು ನೀವು ಇಷ್ಟಪಡಲಿಲ್ಲ,
ಆದರೆ ನನಗೆ ದೇಹವನ್ನು ಸಿದ್ಧಮಾಡಿ ಕೊಟ್ಟಿರುವೆ;
6 ದಹನಬಲಿಗಳಲ್ಲಿಯೂ ಪಾಪಪರಿಹಾರ ಬಲಿಗಳಲ್ಲಿಯೂ
ನೀನು ಸಂತೋಷಪಡುವುದಿಲ್ಲ.
7 ಆಗ ನಾನು ಹೀಗೆಂದೆನು, ‘ಓ, ದೇವರೇ, ಪವಿತ್ರ ವೇದದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವಂತೆ
ನಾನು ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ.’ "10:7 ಕೀರ್ತನೆ 40:6-8
8 ಮೋಶೆಯ ನಿಯಮದ ಪ್ರಕಾರವಾಗಿ ಅರ್ಪಿಸಲಾಗುತ್ತಿದ್ದಂತೆಯೇ, "ಯಜ್ಞವೂ ಅರ್ಪಣೆಯೂ ದಹನಬಲಿಗಳೂ ಪಾಪ ಪರಿಹಾರದ ಬಲಿಯೂ ನಿಮಗೆ ಇಷ್ಟವಾಗಿರಲಿಲ್ಲ. ಅವುಗಳಲ್ಲಿ ನಿಮಗೆ ಸಂತೋಷವಿರಲಿಲ್ಲ," ಎಂದು ಮೊದಲು ಅವರು ಹೇಳಿ, 9 ತರುವಾಯ, "ಇಗೋ, ದೇವರೇ, ನಿಮ್ಮ ಚಿತ್ತವನ್ನು ನೆರವೇರಿಸಲು ಬಂದಿದ್ದೇನೆ!" ಎಂದು ಹೇಳಿದ್ದಾರೆ. ಹೀಗೆ ಅವರು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ರದ್ದು ಮಾಡಿದ್ದಾರೆ. 10 ಹೀಗೆ ಒಂದೇ ಸಾರಿ ಎಲ್ಲಾ ಕಾಲಕ್ಕೂ ಕ್ರಿಸ್ತ ಯೇಸು ತಮ್ಮ ದೇಹವನ್ನು ಸಮರ್ಪಿಸಿದ್ದರ ಮೂಲಕ ದೇವರ ಚಿತ್ತವನ್ನು ನೆರವೇರಿಸಿ, ನಮ್ಮನ್ನು ಶುದ್ಧರನ್ನಾಗಿ ಮಾಡಿದ್ದಾರೆ.