Pular para o conteúdo
Publicidade

ಯೋಹಾನ 1:1-18

ವಾಕ್ಯವು ದೇಹಧಾರಿಯಾದದ್ದು

1 ಆದಿಯಲ್ಲಿ ವಾಕ್ಯವಿತ್ತು, ಆ ವಾಕ್ಯವು ದೇವರ ಬಳಿಯಲ್ಲಿತ್ತು, ಆ ವಾಕ್ಯವು ದೇವರಾಗಿತ್ತು. 2 ಆ ವಾಕ್ಯವೆಂಬುವವರು ಆದಿಯಲ್ಲಿ ದೇವರ ಬಳಿಯಲ್ಲಿದ್ದರು. 3 ಆ ವಾಕ್ಯವೆಂಬುವವರ ಮೂಲಕವಾಗಿಯೇ ಸಮಸ್ತವೂ ಸೃಷ್ಟಿಯಾಯಿತು. ಸೃಷ್ಟಿಯಾದವುಗಳಲ್ಲಿ ಯಾವುದೂ ಅವರಿಲ್ಲದೆ ಸೃಷ್ಟಿಯಾಗಲಿಲ್ಲ. 4 ಅವರಲ್ಲಿ ಜೀವವಿತ್ತು. ಆ ಜೀವವು ಮಾನವರಿಗೆ ಬೆಳಕಾಗಿತ್ತು. 5 ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲೆಯು ಆ ಬೆಳಕನ್ನು ಅಡಗಿಸಲಿಲ್ಲ.

6 ದೇವರು ಕಳುಹಿಸಿದ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಹಾನನು. 7 ತನ್ನ ಮೂಲಕ ಎಲ್ಲರು ವಿಶ್ವಾಸವಿಡುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡಲು ಯೋಹಾನನು ಸಾಕ್ಷಿಯಾಗಿ ಬಂದನು. 8 ಅವನೇ ಆ ಬೆಳಕಾಗಿರಲಿಲ್ಲ. ಆ ಬೆಳಕಿನ ವಿಷಯದಲ್ಲಿ ಸಾಕ್ಷಿಯಾಗಿ ಬಂದನಷ್ಟೇ.

9 ನಿಜ ಬೆಳಕು ಲೋಕಕ್ಕೆ ಬರುವುದಾಗಿತ್ತು. ಆ ಬೆಳಕೇ ಪ್ರತಿ ಮಾನವನಿಗೂ ಬೆಳಕನ್ನು ನೀಡುವುದಾಗಿತ್ತು. 10 ಆ ವಾಕ್ಯವೆಂಬುವವರು ಲೋಕದಲ್ಲಿದ್ದರು ಮತ್ತು ಲೋಕವು ಅವರ ಮೂಲಕ ಉಂಟಾಯಿತು. ಆದರೂ ಲೋಕವು ಅವರ ಗುರುತು ಹಿಡಿಯಲಿಲ್ಲ. 11 ಅವರು ತಮ್ಮ ಸ್ವಜನರ ಬಳಿಗೆ ಬಂದರು. ಆದರೆ ಸ್ವಜನರೇ ಅವರನ್ನು ಸ್ವೀಕರಿಸಲಿಲ್ಲ. 12 ಆದರೂ ಯಾರಾರು ಅವರನ್ನು ಸ್ವೀಕರಿಸಿದರೋ, ಅಂದರೆ ಅವರ ಹೆಸರಿನಲ್ಲಿ ವಿಶ್ವಾಸವಿಟ್ಟರೋ ಅವರೆಲ್ಲರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟರು. 13 ಇವರು ರಕ್ತಸಂಬಂಧದಿಂದಾಗಲಿ, ದೈಹಿಕ ಇಚ್ಛೆಯಿಂದಾಗಲಿ, ಪುರುಷನ ಇಚ್ಛೆಯಿಂದಾಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.

14 ವಾಕ್ಯವೆಂಬುವವರು ದೇಹಧಾರಿಯಾಗಿ ನಮ್ಮ ಮಧ್ಯದಲ್ಲಿ ವಾಸಿಸಿದರು. ನಾವು ಅವರ ಮಹಿಮೆಯನ್ನು ಕಂಡೆವು. ಆ ಮಹಿಮೆಯು ತಂದೆಯಿಂದ ಬಂದ ಏಕೈಕ ಪುತ್ರ ಆಗಿರುವವರಿಗೆ ಇರತಕ್ಕ ಮಹಿಮೆ. ಆ ವಾಕ್ಯವೆಂಬುವವರು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವರಾಗಿದ್ದರು.

15 "ಅವರನ್ನು ಕುರಿತು ಯೋಹಾನನು ಸಾಕ್ಷಿ ಕೊಡುತ್ತಾ, ‘ನನ್ನ ಬಳಿಕ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದವರು ಇವರೇ," ಎಂದು ಘೋಷಿಸಿದನು. 16 ಅವರ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಪಡೆದೆವು. 17 ಏಕೆಂದರೆ ನಿಯಮವು ಮೋಶೆಯ ಮೂಲಕ ಕೊಡಲಾಯಿತು. ಕೃಪೆಯೂ ಸತ್ಯವೂ ಕ್ರಿಸ್ತ ಯೇಸುವಿನ ಮೂಲಕ ಬಂದವು. 18 ದೇವರನ್ನು ಯಾರೂ ಎಂದೂ ಕಂಡಿಲ್ಲ; ತಂದೆ ದೇವರ ಹೃದಯಕ್ಕೆ ಹತ್ತಿರವಾಗಿರುವ ಏಕೈಕ ಪುತ್ರ ಆಗಿರುವವರೂ ಸ್ವತಃ ದೇವರೂ ಆಗಿರುವವರೂ ತಂದೆಯನ್ನು ಪ್ರಕಟಪಡಿಸಿದ್ದಾರೆ.

Estes versículos te tocaram? Ore agora!

+581 estão orando agora.

Junte-se à corrente de oração.