ಯೇಸು ಯೆರೂಸಲೇಮಿಗೆ ಅರಸನಂತೆ ಪ್ರವೇಶಮಾಡಿದ್ದು
12 ಮರುದಿನ ಹಬ್ಬಕ್ಕೆ ಬಂದ ದೊಡ್ಡ ಗುಂಪು ಯೇಸು ಯೆರೂಸಲೇಮಿಗೆ ಬರುತ್ತಿದ್ದಾರೆಂಬ ಸುದ್ದಿ ಕೇಳಿ, 13 ಖರ್ಜೂರದ ಗರಿಗಳನ್ನು ತೆಗೆದುಕೊಂಡು ಅವರನ್ನು ಎದುರುಗೊಳ್ಳಲು ಹೊರಗೆ ಬಂದು,
"ಹೊಸನ್ನ!12:13 ಹೀಬ್ರೂ ಭಾಷೆಯಲ್ಲಿ ಇದರ ಅರ್ಥ ರಕ್ಷಿಸು"
"ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!12:13 ಕೀರ್ತನೆ 118:25,26"
"ಇಸ್ರಾಯೇಲಿನ ಅರಸನಿಗೆ ಶುಭವಾಗಲಿ!"
ಎಂದು ಕೂಗಿದರು. 14 ಯೇಸು ಕತ್ತೆಮರಿಯನ್ನು ಕಂಡು ಅದರ ಮೇಲೆ ಕುಳಿತುಕೊಂಡರು. ಪವಿತ್ರ ವೇದದಲ್ಲಿ ಬರೆದಿರುವಂತೆ:
15 "ಚೀಯೋನ್ ಪುತ್ರಿಯೇ, ಭಯಪಡಬೇಡ,
ಇಗೋ, ನಿನ್ನ ಅರಸ
ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾರೆ,"12:15 ಜೆಕರ್ಯ 9:9
ಎಂಬ ಮಾತು ನೆರವೇರಿತು.
16 ಇವುಗಳನ್ನು ಯೇಸುವಿನ ಶಿಷ್ಯರು ಮೊದಲು ತಿಳಿದಿರಲಿಲ್ಲ. ಆದರೆ ಯೇಸು ಮಹಿಮೆ ಹೊಂದಿದಾಗ ಪವಿತ್ರ ವೇದದಲ್ಲಿ ಅವರ ವಿಷಯವಾಗಿ ಬರೆದಿರುವಂತೆಯೇ, ಇವುಗಳನ್ನು ಜನರು ಅವರಿಗೆ ಮಾಡಿದರೆಂದು ಗ್ರಹಿಸಿದರು.
17 ಯೇಸು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾಗ ಅವರ ಸಂಗಡ ಇದ್ದ ಜನರೇ ಈ ವಿಷಯವನ್ನು ಸಾರುತ್ತಿದ್ದರು. 18 ಯೇಸು ಈ ಸೂಚಕಕಾರ್ಯವನ್ನು ಮಾಡಿದರೆಂದು ಅನೇಕ ಜನರು ಕೇಳಿದ್ದರಿಂದ ಅವರು ಸಹ ಯೇಸುವನ್ನು ಸಂಧಿಸಲು ಬಂದರು. 19 ಆದ್ದರಿಂದ ಫರಿಸಾಯರು ತಮ್ಮತಮ್ಮೊಳಗೆ, "ನೋಡಿದಿರಾ, ನಮಗೆ ಏನೂ ಪ್ರಯೋಜನವಾಗಲಿಲ್ಲ. ಲೋಕವೇ ಆತನ ಹಿಂದೆ ಹೋಗುತ್ತಿದೆ!" ಎಂದು ಮಾತನಾಡಿಕೊಂಡರು.