ಯೇಸು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು
1 ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಅಲ್ಲಿ ಇದ್ದಳು. 2 ಯೇಸು ಮತ್ತು ಅವರ ಶಿಷ್ಯರು ಮದುವೆಗೆ ಆಮಂತ್ರಿತರಾಗಿದ್ದರು. 3 ಅಲ್ಲಿ ದ್ರಾಕ್ಷಾರಸವು ಮುಗಿದು ಹೋದಾಗ, ಯೇಸುವಿನ ತಾಯಿ, "ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ," ಎಂದು ಯೇಸುವಿಗೆ ತಿಳಿಸಿದಳು.
4 ಯೇಸು ಆಕೆಗೆ, "ಅಮ್ಮಾ,2:4 ಗ್ರೀಕ್ ಭಾಷೆಯಲ್ಲಿ ಸ್ತ್ರೀ ನಾನು ನಿಮಗೆ ಏನು ಮಾಡಲು ಬಯಸುತ್ತೀರಿ? ನನ್ನ ಸಮಯವು ಇನ್ನೂ ಬಂದಿಲ್ಲ," ಎಂದು ಹೇಳಿದರು.
5 ಯೇಸುವಿನ ತಾಯಿಯು ಸೇವಕರಿಗೆ, "ಆತನು ನಿಮಗೆ ಹೇಳಿದಂತೆ ಮಾಡಿರಿ," ಎಂದು ಹೇಳಿದಳು.
6 ಯೆಹೂದ್ಯರ ಶುದ್ಧಾಚಾರದ ಪ್ರಕಾರ ಅಲ್ಲಿ ಕಲ್ಲಿನ ಆರು ಬಾನೆಗಳು ಇದ್ದವು. ಪ್ರತಿಯೊಂದು ಬಾನೆಯೂ ಎರಡು ಇಲ್ಲವೆ ಮೂರು ಕೊಡದ ಅಳತೆಯುಳ್ಳದ್ದಾಗಿತ್ತು.2:6 ಸುಮಾರು 75 ಲೀಟರಿಂದ 115 ಲೀಟರ್
7 ಯೇಸು ಸೇವಕರಿಗೆ, "ಆ ಬಾನೆಗಳಲ್ಲಿ ನೀರು ತುಂಬಿರಿ," ಎಂದರು. ಅವರು ಅವುಗಳನ್ನು ಕಂಠದವರೆಗೆ ತುಂಬಿದರು.
8 ಅನಂತರ ಯೇಸು ಅವರಿಗೆ, "ಈಗ ಇದನ್ನು ತೆಗೆದುಕೊಂಡು ಔತಣದ ಮೇಲ್ವಿಚಾರಕನಿಗೆ ಕೊಡಿರಿ," ಎಂದರು.
ಸೇವಕರು ತೆಗೆದುಕೊಂಡು ಹೋದರು. 9 ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂತೆಂದು ಅವನಿಗೆ ತಿಳಿದಿರಲಿಲ್ಲ. ಆದರೆ ನೀರನ್ನು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು, 10 "ಪ್ರತಿಯೊಬ್ಬನು ಉತ್ತಮ ದ್ರಾಕ್ಷಾರಸವನ್ನು ಮೊದಲು ತಂದಿಟ್ಟು ಜನರು ತುಂಬಾ ಕುಡಿದ ಮೇಲೆ ಸಾಧಾರಣವಾದದ್ದನ್ನು ಕೊಡುತ್ತಾರೆ, ನೀನಾದರೋ ಉತ್ತಮ ದ್ರಾಕ್ಷಾರಸವನ್ನು ಇನ್ನೂ ಇಟ್ಟುಕೊಂಡಿರುವೆ," ಎಂದನು.
11 ಯೇಸು ಗಲಿಲಾಯದ ಕಾನಾದಲ್ಲಿ ಮಾಡಿದ ಸೂಚಕಕಾರ್ಯಗಳಲ್ಲಿ ಇದು ಮೊದಲನೆಯದಾಗಿತ್ತು. ಹೀಗೆ ಯೇಸು ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಯೇಸುವಿನ ಶಿಷ್ಯರು ಅವರಲ್ಲಿ ನಂಬಿಕೆಯಿಟ್ಟರು.