ಯೇಸು ಮತ್ತು ಅದ್ಭುತಕರವಾದ ಮೀನು ಹಿಡಿಯುವಿಕೆ
1 ಇವುಗಳಾದ ಮೇಲೆ ಯೇಸು ಗಲಿಲಾಯ21:1 ಗಲಿಲಾಯದ ಇನ್ನೊಂದು ಹೆಸರು ತಿಬೇರಿ ಸರೋವರದ ಬಳಿಯಲ್ಲಿ ಶಿಷ್ಯರಿಗೆ ತಮ್ಮನ್ನು ಪುನಃ ತೋರಿಸಿಕೊಂಡರು. ಅವರು ಈ ರೀತಿಯಾಗಿ ಕಾಣಿಸಿಕೊಂಡರು: 2 ಸೀಮೋನ ಪೇತ್ರನೂ ದಿದುಮನೆಂಬ ತೋಮನೂ ಗಲಿಲಾಯದ ಕಾನಾ ಊರಿನ ನತಾನಯೇಲನೂ ಜೆಬೆದಾಯನ ಮಕ್ಕಳೂ ಅವರ ಶಿಷ್ಯರಲ್ಲಿ ಇನ್ನಿಬ್ಬರೂ ಒಟ್ಟಾಗಿ ಕೂಡಿದ್ದರು. 3 ಆಗ ಸೀಮೋನ ಪೇತ್ರನು ಅವರಿಗೆ, "ನಾನು ಮೀನು ಹಿಡಿಯಲು ಹೋಗುತ್ತೇನೆ," ಎಂದು ಹೇಳಲು ಅವರು ಅವನಿಗೆ, "ನಾವು ಸಹ ನಿನ್ನ ಸಂಗಡ ಬರುತ್ತೇವೆ," ಎಂದರು. ಅವರು ಹೊರಟು ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿ ಅವರಿಗೆ ಏನೂ ಸಿಗಲಿಲ್ಲ.
4 ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರೇ ಯೇಸು ಎಂದು ಶಿಷ್ಯರಿಗೆ ತಿಳಿಯಲಿಲ್ಲ.
5 ಆಗ ಯೇಸು ಅವರಿಗೆ, "ಮಕ್ಕಳೇ, ನಿಮ್ಮ ಬಳಿಯಲ್ಲಿ ಮೀನುಗಳಿವೆಯೋ?" ಎಂದು ಕೇಳಲು,
ಅವರು ಯೇಸುವಿಗೆ, "ಇಲ್ಲ," ಎಂದು ಉತ್ತರಕೊಟ್ಟರು.
6 ಯೇಸು ಶಿಷ್ಯರಿಗೆ, "ದೋಣಿಯ ಬಲಗಡೆಯಲ್ಲಿ ಬಲೆ ಬೀಸಿರಿ; ನಿಮಗೆ ಮೀನು ಸಿಗುತ್ತವೆ," ಎಂದರು. ಅವರು ಬಲೆ ಬೀಸಿದಾಗ ಮೀನುಗಳ ರಾಶಿ ಬಲೆಗೆ ಬಿದ್ದದರ ದೆಸೆಯಿಂದ ಅವರಿಗೆ ಎಳೆಯುವುದಕ್ಕೆ ಆಗದೆ ಹೋಯಿತು.
7 ಯೇಸು ಪ್ರೀತಿಸಿದ ಆ ಶಿಷ್ಯನು ಪೇತ್ರನಿಗೆ, "ಆತನು ಕರ್ತನೇ," ಎಂದನು. ಅದನ್ನು ಕೇಳಿ ಸೀಮೋನ ಪೇತ್ರನು ತಾನು ತೆಗೆದುಬಿಟ್ಟಿದ್ದ ತನ್ನ ಮೇಲಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ಧುಮುಕಿದನು. 8 ಉಳಿದ ಶಿಷ್ಯರು ಮೀನುಗಳಿದ್ದ ಬಲೆಯನ್ನು ಎಳೆಯುತ್ತಾ ಆ ದೋಣಿಯಲ್ಲಿ ಬಂದರು. ಏಕೆಂದರೆ ಅವರು ದಡದಿಂದ ಹೆಚ್ಚು ದೂರವಿರಲಿಲ್ಲ. ಸುಮಾರು ತೊಂಬತ್ತು ಮೀಟರ್ ದೂರವಿತ್ತು. 9 ಅವರು ದಡವನ್ನು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನೂ ರೊಟ್ಟಿಯನ್ನೂ ಕಂಡರು.
10 ಯೇಸು ಅವರಿಗೆ, "ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ," ಎಂದರು. 11 ಸೀಮೋನ ಪೇತ್ರನು ಹೋಗಿ ನೂರೈವತ್ತಮೂರು ದೊಡ್ಡ ಮೀನುಗಳಿಂದ ತುಂಬಿದ ಬಲೆಯನ್ನು ದಡಕ್ಕೆ ಎಳೆದನು. ಅಷ್ಟು ಮೀನುಗಳಿದ್ದರೂ ಬಲೆಯು ಹರಿದಿರಲಿಲ್ಲ.