ಮೂವತ್ತೆಂಟು ವರ್ಷದ ರೋಗಿಯ ಸ್ವಸ್ಥತೆ
1 ಇದಾದ ಮೇಲೆ ಯೆಹೂದ್ಯರ ಹಬ್ಬವೊಂದು ಬಂತು. ಆದ್ದರಿಂದ, ಯೇಸು ಯೆರೂಸಲೇಮಿಗೆ ಹೋದರು. 2 ಯೆರೂಸಲೇಮಿನಲ್ಲಿ "ಕುರಿಬಾಗಿಲು" ಎಂಬ ಸ್ಥಳದ ಬಳಿ ಒಂದು ಕೊಳವಿದೆ. ಇದನ್ನು ಹೀಬ್ರೂ ಭಾಷೆಯಲ್ಲಿ ಬೇತ್ಸಥಾ5:2 ಅರಾಮಿಕ್ ಭಾಷೆಯಲ್ಲಿ ಕರುಣಾಭವನ ಎಂದು ಅರ್ಥ ಎಂದು ಕರೆಯುತ್ತಾರೆ. ಅದಕ್ಕೆ ಐದು ಮಂಟಪಗಳಿದ್ದವು. 3 ಅವುಗಳಲ್ಲಿ ಅಸ್ವಸ್ಥರೂ ಕುರುಡರೂ ಕುಂಟರೂ ಪಾರ್ಶ್ವವಾಯು ಪೀಡಿತರೂ ಆಗಿದ್ದವರ ದೊಡ್ಡ ಸಮೂಹವೇ ಬಿದ್ದುಕೊಂಡು, ನೀರು ಉಕ್ಕುವುದನ್ನೇ ಕಾದು ನೋಡುತ್ತಿದ್ದರು. 4 ಏಕೆಂದರೆ ಕೆಲವೊಮ್ಮೆ ದೇವದೂತನು ಇಳಿದುಬಂದು ನೀರನ್ನು ಕಲಕುತ್ತಿದ್ದನು. ನೀರು ಕಲಕಿದೊಡನೆ ಮೊದಲು ಯಾರು ನೀರಿನೊಳಗೆ ಹೆಜ್ಜೆಯಿಡುತ್ತಿದ್ದರೋ ಅವರಿಗೆ ಯಾವ ರೋಗವಿದ್ದರೂ ಅದು ಗುಣವಾಗುತ್ತಿತ್ತು.5:4 ಕೆಲವು ಮೂಲ ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ. 5 ಆಗ ಮೂವತ್ತೆಂಟು ವರ್ಷದಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನು ಅಲ್ಲಿ ಇದ್ದನು. 6 ಅವನು ಬಿದ್ದುಕೊಂಡಿರುವುದನ್ನು ಯೇಸು ಕಂಡು ಅವನು ಈಗಾಗಲೇ ಬಹುಕಾಲದಿಂದ ಆ ಸ್ಥಿತಿಯಲ್ಲಿದ್ದಾನೆಂದು ತಿಳಿದು ಅವನಿಗೆ, "ನಿನಗೆ ಗುಣಹೊಂದಲು ಮನಸ್ಸಿದೆಯೋ?" ಎಂದು ಕೇಳಿದರು.
7 ಅದಕ್ಕೆ ಆ ರೋಗಿಯು ಯೇಸುವಿಗೆ, "ಸ್ವಾಮಿ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವುದಕ್ಕೆ ನನಗೆ ಯಾರೂ ಇಲ್ಲ. ಆದರೆ ನಾನು ಹೋಗುತ್ತಿರುವಾಗಲೇ ನನಗಿಂತ ಮುಂದಾಗಿ ಮತ್ತೊಬ್ಬನು ಹೋಗುತ್ತಾನೆ," ಎಂದನು.
8 ಯೇಸು ಅವನಿಗೆ, "ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ," ಎಂದರು. 9 ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು.
ಆ ದಿನವು ಸಬ್ಬತ್ ದಿನವಾಗಿತ್ತು.