ಯೇಸು ಸಬ್ಬತ್ ದಿನದಲ್ಲಿ ಹುಟ್ಟು ಕುರುಡನಿಗೆ ಕಣ್ಣು ಕೊಟ್ಟದ್ದು
1 ಯೇಸು ನಡೆದು ಹೋಗುತ್ತಿದ್ದಾಗ, ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡರು. 2 ಯೇಸುವಿನ ಶಿಷ್ಯರು, "ಬೋಧಕರೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಈ ಮನುಷ್ಯನ ಪಾಪದಿಂದಲೋ ಇವನ ತಂದೆತಾಯಿಗಳ ಪಾಪದಿಂದಲೋ?" ಎಂದು ಅವರನ್ನು ಕೇಳಿದರು.
3 ಯೇಸು, "ಈ ಮನುಷ್ಯನಾಗಲಿ ಇವನ ತಂದೆತಾಯಿಗಳಾಗಲಿ ಪಾಪಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ವ್ಯಕ್ತವಾಗುವಂತೆ ಹೀಗಾಯಿತು. 4 ನನ್ನನ್ನು ಕಳುಹಿಸಿದ ತಂದೆಯ ಕೆಲಸಗಳನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬಂದಾಗ ಯಾರಿಗೂ ಕೆಲಸ ಮಾಡಲಾಗದು. 5 ನಾನು ಈ ಲೋಕದಲ್ಲಿರುವಾಗ ಲೋಕದ ಬೆಳಕಾಗಿದ್ದೇನೆ," ಎಂದರು.
6 ಯೇಸು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಮಣ್ಣಿನ ಲೇಪಮಾಡಿ ಆ ಲೇಪವನ್ನು ಅವನ ಕಣ್ಣುಗಳಿಗೆ ಹಚ್ಚಿದರು. 7 ಅವನಿಗೆ, "ಹೋಗು, ಸಿಲೋವ ಕೊಳದಲ್ಲಿ ತೊಳೆದುಕೋ," ಎಂದರು. ಸಿಲೋವ ಎಂದರೆ, "ಕಳುಹಿಸಲಾದವನು" ಎಂದರ್ಥ. ಕುರುಡನು ಹೋಗಿ ಕಣ್ಣು ತೊಳೆದುಕೊಂಡು ದೃಷ್ಟಿಹೊಂದಿದವನಾಗಿ ಬಂದನು.
8 ಆಗ ನೆರೆಯವರು ಮತ್ತು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ಕಂಡವರು, "ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದವನು ಇವನೇ ಅಲ್ಲವೇ?" ಎಂದರು. 9 ಕೆಲವರು, "ಹೌದು, ಇವನೇ," ಎಂದರು.
ಇನ್ನೂ ಬೇರೆಯವರು, "ಇಲ್ಲಾ, ಇವನು ಅವನ ಹಾಗೆ ಇದ್ದಾನೆ," ಎಂದರು.
ಅವನಾದರೋ, "ನಾನೇ ಅವನು," ಎಂದು ಹೇಳಿದನು.
10 ಕೆಲವರು ಅವನಿಗೆ, "ಹಾಗಾದರೆ ನಿನಗೆ ದೃಷ್ಟಿ ಹೇಗೆ ಬಂತು?" ಎಂದು ಕೇಳಲು,
11 ಅವನು, "ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ,’ ಎಂದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು, ನನಗೆ ದೃಷ್ಟಿ ಬಂತು," ಎಂದನು.
12 ಅವರು ಅವನಿಗೆ, "ಆತನು ಎಲ್ಲಿದ್ದಾನೆ?" ಎಂದು ಕೇಳಲು,
ಅವನು, "ನನಗೆ ಗೊತ್ತಿಲ್ಲ," ಎಂದನು.