ಏಹೂದ್
12 ಇಸ್ರಾಯೇಲರು ಯೆಹೋವ ದೇವರ ಮುಂದೆ ತಿರುಗಿ ಕೆಟ್ಟದ್ದನ್ನೇ ಮಾಡಿದರು. ಅವರು ಯೆಹೋವ ದೇವರ ಮುಂದೆ ಕೆಟ್ಟದ್ದನ್ನೇ ಮಾಡಿದ್ದರಿಂದ, ಯೆಹೋವ ದೇವರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಇಸ್ರಾಯೇಲಿಗೆ ವಿರೋಧವಾಗಿ ಬಲಪಡಿಸಿದರು. 13 ಅವನು ಅಮ್ಮೋನನ ಮತ್ತು ಅಮಾಲೇಕ್ಯರನ್ನು ಕೂಡಿಸಿಕೊಂಡು ಬಂದು, ಇಸ್ರಾಯೇಲರನ್ನು ಹೊಡೆದು, ಖರ್ಜೂರ ಗಿಡಗಳಿರುವ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು. 14 ಇಸ್ರಾಯೇಲರು ಮೋವಾಬ್ಯರ ಅರಸನಾದ ಎಗ್ಲೋನನನ್ನು ಹದಿನೆಂಟು ವರ್ಷ ಸೇವಿಸಿದರು.
15 ಆದರೆ ಇಸ್ರಾಯೇಲರು ಯೆಹೋವ ದೇವರನ್ನು ಕೂಗಿದಾಗ, ಯೆಹೋವ ದೇವರು ಅವರಿಗೆ ಬೆನ್ಯಾಮೀನನಾದ ಗೇರನ ಮಗ ಏಹೂದನನ್ನು ರಕ್ಷಿಸುವುದಕ್ಕೆ ಎಬ್ಬಿಸಿದರು. ಅವನು ಎಡಗೈಯವನಾಗಿದ್ದನು. ಅವನ ಕೈಯಿಂದ ಇಸ್ರಾಯೇಲರು ಮೋವಾಬಿನ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಕಳುಹಿಸಿದರು. 16 ಏಹೂದನು ಇಬ್ಬಾಯಿಯುಳ್ಳ ಒಂದು ಮೊಳ ಉದ್ದವಾದ ಒಂದು ಕಠಾರಿಯನ್ನು ತನಗೆ ಮಾಡಿಕೊಂಡು, ಅದನ್ನು ತನ್ನ ವಸ್ತ್ರದ ಕೆಳಗೆ ತನ್ನ ಬಲಗಡೆ ತೊಡೆಯಲ್ಲಿ ಕಟ್ಟಿಕೊಂಡು, 17 ಕಾಣಿಕೆಯನ್ನು ಮೋವಾಬಿನ ಅರಸನಾದ ಎಗ್ಲೋನನ ಬಳಿಗೆ ತಂದನು. ಎಗ್ಲೋನನು ಬಹು ದಪ್ಪ ಮನುಷ್ಯನಾಗಿದ್ದನು. 18 ಏಹೂದನು ಕಾಣಿಕೆಯನ್ನು ಕೊಟ್ಟು ತೀರಿಸಿದಾಗ, ಕಾಣಿಕೆಯನ್ನು ಹೊತ್ತುಕೊಂಡು ಬಂದ ಜನರನ್ನು ಕಳುಹಿಸಿಬಿಟ್ಟು, 19 ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಕ್ಕೆ ತಿರುಗಿ, ಅವನ ಬಳಿಗೆ ಬಂದು, "ಅರಸನೇ, ನಿನ್ನ ಸಂಗಡ ಹೇಳಬೇಕಾದ ರಹಸ್ಯವಾದ ಒಂದು ಮಾತು ಇದೆ," ಎಂದನು.
ಅವನು, "ನಿಶ್ಶಬ್ದ," ಎಂದು ಹೇಳಿದಾಗ, ಅವನ ಬಳಿಯಲ್ಲಿ ನಿಂತಿದ್ದವರೆಲ್ಲರು ಅವನನ್ನು ಬಿಟ್ಟು ಹೊರಗೆ ಹೋದರು.
20 ಅವನು ತನಗೋಸ್ಕರ ಮಾತ್ರ ಇದ್ದ ಬೇಸಿಗೆಯ ಕೊಠಡಿಯಲ್ಲಿ ಕುಳಿತಾಗ, ಏಹೂದನು ಅವನ ಬಳಿಗೆ ಪ್ರವೇಶಿಸಿ, "ನಿನ್ನ ಸಂಗಡ ಹೇಳಬೇಕಾದ ದೇವರ ಸಂದೇಶ ನನಗಿದೆ," ಎಂದನು. ಅವನು ತನ್ನ ಸಿಂಹಾಸನದಿಂದ ಎದ್ದನು. 21 ಏಹೂದನು ತನ್ನ ಎಡಗೈಯನ್ನು ಚಾಚಿ, ತನ್ನ ಬಲಗಡೆ ತೊಡೆಯಲ್ಲಿದ್ದ ಕಠಾರಿಯನ್ನು ತೆಗೆದುಕೊಂಡು, ಅವನ ಹೊಟ್ಟೆಯಲ್ಲಿ ತಿವಿದನು. 22 ಅದು ಅಲಗಿನ ಸಂಗಡ ಹಿಡಿ ಸಮೇತ ಅವನ ಹೊಟ್ಟೆಯಲ್ಲಿ ಹೊಕ್ಕು, ಕಿತ್ತು ತೆಗೆಯಕೂಡದ ಹಾಗೆ ಕೊಬ್ಬು ಅಲಗನ್ನು ಸುತ್ತಿಕೊಂಡಿತು. ಅದರಿಂದ ಮಲವು ಹೊರಟಿತು. 23 ಆಗ ಏಹೂದನು ಕೊಠಡಿಯ ಬಾಗಿಲನ್ನು ತನ್ನ ಹಿಂಭಾಗದಲ್ಲಿ ಮುಚ್ಚಿ, ಬೀಗವನ್ನು ಹಾಕಿ, ದ್ವಾರಾಂಗಳದಿಂದ ಹೊರಟುಹೋದನು.
24 ಅವನು ಹೋದ ತರುವಾಯ, ಕೊಠಡಿಯ ಸೇವಕರು ಬಾಗಿಲು ಮುಚ್ಚಿರುವುದನ್ನು ಕಂಡು, "ಅರಸನು ನಿಶ್ಚಯವಾಗಿ ತನ್ನ ತಂಪಾದ ಕೋಣೆಯಲ್ಲಿ ವಿಸರ್ಜನೆಗಾಗಿ ಹೋಗಿರಬೇಕು," ಎಂದುಕೊಂಡರು. 25 ಅವರು ತಮಗೆ ಬೇಸರವಾಗುವ ಮಟ್ಟಿಗೂ ಕಾದಿದ್ದರು. ಆದರೆ, ಅವನು ಕೊಠಡಿ ಬಾಗಿಲನ್ನು ತೆರೆಯದೆ ಇದ್ದುದರಿಂದ, ಅವರು ಬೀಗದ ಕೈಯನ್ನು ತೆಗೆದುಕೊಂಡು ಬಾಗಿಲನ್ನು ತೆರೆದರು. ಅವರ ಪ್ರಭುವು ನೆಲದ ಮೇಲೆ ಮರಣಹೊಂದಿದ್ದನು.
26 ಅವರು ಆಲಸ್ಯ ಮಾಡುತ್ತಿರುವಾಗ, ಏಹೂದನು ತಪ್ಪಿಸಿಕೊಂಡು ವಿಗ್ರಹಗಳನ್ನು ದಾಟಿ, ಸೇಯೀರಾತನ್ನು ಸೇರಿ ತಪ್ಪಿಸಿಕೊಂಡನು. 27 ಅವನು ಅಲ್ಲಿ ಬಂದಾಗ, ಎಫ್ರಾಯೀಮನ ಬೆಟ್ಟದಲ್ಲಿ ತುತೂರಿಯನ್ನು ಊದಿದನು. ಆಗ ಇಸ್ರಾಯೇಲರು ಅವನ ಸಂಗಡ ಬೆಟ್ಟದಿಂದ ಇಳಿದರು. ಅವನು ಇವರ ಮುಂದೆ ನಡೆದರು.
28 ಅವರಿಗೆ, "ನೀವು ನನ್ನ ಹಿಂದೆ ಬನ್ನಿರಿ. ಏಕೆಂದರೆ ಯೆಹೋವ ದೇವರು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟರು," ಎಂದನು. ಅವರು ಅವನ ಹಿಂದೆ ಬಂದು, ಮೋವಾಬ್ಯರಿಗೆ ಎದುರಾದ ಯೊರ್ದನ್ ನದಿ ರೇವುಗಳನ್ನು ಹಿಡಿದು, ಒಬ್ಬರನ್ನಾದರೂ ದಾಟಗೊಡದೆ, 29 ಮೋವಾಬ್ಯರಲ್ಲಿ ಹೆಚ್ಚು ಕಡಿಮೆ ಹತ್ತು ಸಾವಿರ ಜನರನ್ನು ಹತಮಾಡಿದರು. ಅವರೆಲ್ಲರು ಪುಷ್ಟರೂ, ಪರಾಕ್ರಮಿಗಳೂ ಆಗಿದ್ದರು. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ. 30 ಹೀಗೆ ಆ ದಿವಸದಲ್ಲಿ ಮೋವಾಬ್ ಇಸ್ರಾಯೇಲರ ಆಳಿಕೆಗೆ ಅಧೀನವಾಗಿತ್ತು. ದೇಶವು ಎಂಬತ್ತು ವರ್ಷ ವಿಶ್ರಾಂತಿಗೊಂಡಿತು.