4 ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿ ಇಸ್ರಾಯೇಲರಿಗೆ ನ್ಯಾಯ ತೀರಿಸುತ್ತಿದ್ದಳು. 5 ದೆಬೋರಳು ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿ ಎಫ್ರಾಯೀಮ್ ಬೆಟ್ಟದಲ್ಲಿ ಖರ್ಜೂರದ ಮರದ ಕೆಳಗೆ ವಾಸಿಸುತ್ತಿದ್ದಳು. ಇಸ್ರಾಯೇಲರು ಅವಳ ಬಳಿಗೆ ನ್ಯಾಯಕ್ಕಾಗಿ ಬರುತ್ತಿದ್ದರು. 6 ಅವಳು ಕೆದೆಷ್ ನಫ್ತಾಲಿಯಲ್ಲಿರುವ ಅಬೀನೋವಮನ ಮಗ ಬಾರಾಕನನ್ನು ಕರೆಯಿಸಿ ಅವನಿಗೆ, "ಇಸ್ರಾಯೇಲ್ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ್ದೇನೆಂದರೆ, ‘ನೀನು ನಫ್ತಾಲಿಯರಲ್ಲಿಯು, ಜೆಬುಲೂನರಲ್ಲಿಯು ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು. 7 ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ, ಅವನ ರಥಗಳನ್ನೂ, ಅವನ ಸೈನ್ಯವನ್ನೂ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬಂದು, ನಿನ್ನ ಕೈಗೆ ಒಪ್ಪಿಸುವೆನು,’ ಎಂದು ಆಜ್ಞಾಪಿಸಿದನು," ಎಂದಳು.
8 ಬಾರಾಕನು ಅವಳಿಗೆ, "ನೀನು ನನ್ನ ಸಂಗಡ ಬಂದರೆ ನಾನು ಹೋಗುವೆನು. ನೀನು ನನ್ನ ಸಂಗಡ ಬಾರದೆ ಇದ್ದರೆ ನಾನು ಹೋಗುವುದಿಲ್ಲ," ಎಂದನು.
9 ಅದಕ್ಕವಳು, "ನಾನು ನಿನ್ನ ಸಂಗಡ ಖಂಡಿತವಾಗಿ ಬರುವೆನು. ಆದರೆ ನೀನು ಹೋಗುವ ಪ್ರಯಾಣದಿಂದ ಉಂಟಾಗುವ ಘನತೆ ನಿನ್ನದಾಗಿರುವುದಿಲ್ಲ. ಏಕೆಂದರೆ ಯೆಹೋವ ದೇವರು ಸೀಸೆರನನ್ನು ಒಬ್ಬ ಸ್ತ್ರೀಯ ಕೈಗೆ ಒಪ್ಪಿಸಿಬಿಡುವೆನು," ಎಂದು ಹೇಳಿದಳು. ದೆಬೋರಳು ಎದ್ದು ಬಾರಾಕನ ಸಂಗಡ ಕೆದೆಷಿಗೆ ಹೋದಳು.