10 ಯೇಸು ಸಬ್ಬತ್ ದಿನದಲ್ಲಿ ಒಂದು ಸಭಾಮಂದಿರದೊಳಗೆ ಬೋಧಿಸುತ್ತಾ ಇದ್ದರು, 11 ಆಗ, ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು. ಆಕೆ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು. 12 ಯೇಸು ಆಕೆಯನ್ನು ಕಂಡು, ಹತ್ತಿರಕ್ಕೆ ಕರೆದು ಆಕೆಗೆ, "ಅಮ್ಮಾ, ನೀನು ಈ ನಿನ್ನ ಬಲಹೀನತೆಯಿಂದ ಬಿಡುಗಡೆಯಾಗಿದ್ದಿ," ಎಂದು ಹೇಳಿ, 13 ಯೇಸು ಆಕೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು, ಕೂಡಲೇ ಆಕೆಯು ನೆಟ್ಟಗಾದಳು ಮತ್ತು ದೇವರನ್ನು ಸ್ತುತಿಸಿದಳು.
14 ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, "ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ," ಎಂದನು.
15 ಅದಕ್ಕೆ ಕರ್ತದೇವರು ಅವನಿಗೆ, "ಕಪಟಿಗಳೇ! ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ, ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವುದಕ್ಕಾಗಿ ಹೋಗುವುದಿಲ್ಲವೇ? 16 ಅಬ್ರಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರ್ಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೇ?" ಎಂದರು.
17 ಯೇಸು ಇದನ್ನು ಹೇಳುತ್ತಿರುವಾಗ, ಅವರ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು, ಆದರೆ ಇತರರು, ಅವರಿಂದ ನಡೆದ ಎಲ್ಲಾ ಮಹಿಮೆಯುಳ್ಳ ಕಾರ್ಯಗಳಿಗಾಗಿ ಸಂತೋಷಪಟ್ಟರು.