ಫರಿಸಾಯ ಹಾಗೂ ಸುಂಕದವನ ಸಾಮ್ಯ
9 ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸೆಯನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ, ಯೇಸು ಈ ಸಾಮ್ಯವನ್ನು ಹೇಳಿದರು: 10 "ಇಬ್ಬರು ಪ್ರಾರ್ಥನೆಮಾಡುವುದಕ್ಕೆ ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬನು ಫರಿಸಾಯನು ಮತ್ತೊಬ್ಬನು ಸುಂಕದವನು. 11 ಫರಿಸಾಯನು ನಿಂತುಕೊಂಡು: ‘ದೇವರೇ, ಸುಲಿಗೆ ಮಾಡುವವರು, ಅನೀತಿವಂತರು, ವ್ಯಭಿಚಾರಿಗಳು ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ನಾನಲ್ಲ. ಆದ್ದರಿಂದ ನಾನು ನಿನಗೆ ಸ್ತೋತ್ರ ಮಾಡುತ್ತೇನೆ. 12 ನಾನು ವಾರಕ್ಕೆ ಎರಡು ಸಾರಿ ಉಪವಾಸ ಮಾಡುತ್ತೇನೆ. ನನಗಿರುವ ಎಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ,’ ಎಂದು ಹೇಳಿ ತನಗೆ ತಾನೇ ಪ್ರಾರ್ಥಿಸಿದನು.
13 "ಆದರೆ ಸುಂಕದವನು ದೂರದಲ್ಲಿ ನಿಂತು, ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಧೈರ್ಯಗೊಳ್ಳದೇ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ ಪಾಪಿಯಾದವನು ನಾನೇ ನನ್ನನ್ನು ಕರುಣಿಸು,’ ಎಂದು ಪ್ರಾರ್ಥಿಸಿದನು.
14 "ನಾನು ನಿಮಗೆ ಹೇಳುತ್ತೇನೆ, ಅವನಲ್ಲ, ಇವನೇ ನೀತಿವಂತನೆಂಬ ನಿರ್ಣಯ ಪಡೆದವನಾಗಿ ತನ್ನ ಮನೆಗೆ ಹೋದನು. ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು," ಎಂದರು.