ಯೇಸುವನ್ನು ದೇವಾಲಯದಲ್ಲಿ ಸಮರ್ಪಿಸಿದ್ದು
22 ಮೋಶೆಯ ನಿಯಮದ ಪ್ರಕಾರ ಮರಿಯಳಿಗೆ ಶುದ್ಧೀಕರಣದ2:22 ಯಾಜಕ 12:1-8 ದಿವಸಗಳು ಮುಗಿದ ಮೇಲೆ, ಯೋಸೇಫನು ಮತ್ತು ಮರಿಯಳು ಶಿಶುವನ್ನು ಕರ್ತದೇವರಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತಂದರು. 23 ಕರ್ತದೇವರ ನಿಯಮದಲ್ಲಿ ಬರೆದಿರುವಂತೆ, "ಪ್ರತಿಯೊಂದು ಚೊಚ್ಚಲ ಗಂಡು ಮಗು ಕರ್ತದೇವರಿಗೆ ಪವಿತ್ರವಾಗಿ ಸಮರ್ಪಿಸಬೇಕು,"2:23 ವಿಮೋ 13:2,12 24 ಎಂತಲೂ, "ಒಂದು ಜೊತೆ ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ಬಲಿ ಅರ್ಪಿಸಬೇಕು,"2:24 ಯಾಜಕ 12:8 ಎಂತಲೂ ಕರ್ತದೇವರ ನಿಯಮದಲ್ಲಿ ಹೇಳಿರುವ ಪ್ರಕಾರ ಅವರು ಸಮರ್ಪಿಸಿದರು.
25 ಆಗ ಸಿಮೆಯೋನನೆಂಬ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಅವನು ನೀತಿವಂತನೂ ಭಕ್ತನೂ ಆಗಿದ್ದನು. ಅವನು ಇಸ್ರಾಯೇಲರನ್ನು ಸಂತೈಸುವ ಒಬ್ಬರ ಬರುವಿಕೆಗಾಗಿ ಕಾಯುತ್ತಿದ್ದನು. ಪವಿತ್ರಾತ್ಮ ದೇವರ ಪ್ರಸನ್ನತೆ ಅವನ ಮೇಲಿತ್ತು. 26 ಇದಲ್ಲದೆ, ಅವನು ಕರ್ತದೇವರು ಕಳುಹಿಸಲಿರುವ ಕ್ರಿಸ್ತನನ್ನು2:26 ಕ್ರಿಸ್ತ ಯೆಹೂದ್ಯರು ನಿರೀಕ್ಷಿಸುತ್ತಿದ್ದ ವಿಮೋಚಕನು ಕಾಣುವುದಕ್ಕಿಂತ ಮುಂಚೆ ಮರಣ ಹೊಂದುವುದಿಲ್ಲವೆಂದು ಪವಿತ್ರಾತ್ಮನಿಂದ ಅವನಿಗೆ ಪ್ರಕಟನೆಯಾಗಿತ್ತು. 27 ಅವನು ಪವಿತ್ರಾತ್ಮ ಪ್ರೇರಣೆಯಿಂದ ದೇವಾಲಯದ ಅಂಗಳದೊಳಗೆ ಬಂದನು, ಆಗ ನಿಯಮವನ್ನು ಪೂರೈಸಲು ತಂದೆತಾಯಿಗಳು ಶಿಶು ಯೇಸುವನ್ನು ಒಳಗೆ ತಂದರು. 28 ಆಗ ಸಿಮೆಯೋನನು ಶಿಶುವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದೇವರನ್ನು ಕೊಂಡಾಡುತ್ತಾ ಹೀಗೆಂದನು:
29 "ಸರ್ವೇಶ್ವರರಾದ ಕರ್ತದೇವರೇ, ನಿಮ್ಮ ವಾಗ್ದಾನದ ಪ್ರಕಾರ,
ನಿಮ್ಮ ದಾಸನನ್ನು ಸಮಾಧಾನದಿಂದ ಈಗ ಕಳುಹಿಸಿರಿ.
30 ನನ್ನ ಕಣ್ಣುಗಳು ನಿಮ್ಮ ರಕ್ಷಣೆಯನ್ನು ಕಂಡವು,
31 ಈ ರಕ್ಷಣೆಯನ್ನು ನೀವು ಎಲ್ಲಾ ಜನಗಳ ಮುಂದೆ ಸಿದ್ಧಪಡಿಸಿದ್ದೀರಿ:
32 ಅದು ಯೆಹೂದ್ಯರಲ್ಲದವರಿಗೆ ಪ್ರಕಟಣೆಯ ಬೆಳಕೂ,
ನಿಮ್ಮ ಪ್ರಜೆಯಾದ ಇಸ್ರಾಯೇಲರ ಮಹಿಮೆಯೂ ಆಗಿದೆ."
33 ಶಿಶುವಿನ ವಿಷಯವಾಗಿ ಸಿಮೆಯೋನನು ಹೇಳಿದ ಮಾತುಗಳಿಗೆ ಶಿಶುವಿನ ತಂದೆತಾಯಿಗಳು ಆಶ್ಚರ್ಯಪಟ್ಟರು. 34 ಅನಂತರ ಸಿಮೆಯೋನನು ಅವರನ್ನು ಆಶೀರ್ವದಿಸಿ, ಶಿಶುವಿನ ತಾಯಿ ಮರಿಯಳಿಗೆ, "ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವುದಕ್ಕೂ ಏಳುವುದಕ್ಕೂ ಈ ಮಗು ನೇಮಕವಾಗಿದೆ, ಜನರು ಎದುರು ಮಾತನಾಡುವುದಕ್ಕೆ ಈ ಮಗು ಗುರುತಾಗಿರುವದು. 35 ಹೀಗೆ ಅನೇಕ ಹೃದಯಗಳ ಆಲೋಚನೆಗಳು ಪ್ರಕಟವಾಗುವವು. ನಿನ್ನ ಸ್ವಂತ ಪ್ರಾಣವನ್ನು ಸಹ ಖಡ್ಗವು ತಿವಿಯುವುದು" ಎಂದನು.
36 ಅಲ್ಲಿ ಆಶೇರನ ಗೋತ್ರದ ಫನೂಯೇಲನ ಮಗಳಾದ ಅನ್ನಳೆಂಬ ಒಬ್ಬ ಬಹು ಮುಪ್ಪಿನ ಪ್ರವಾದಿನಿಯಿದ್ದಳು. ಅವಳು ಮದುವೆಯಾಗಿ ಗಂಡನೊಂದಿಗೆ ಏಳು ವರ್ಷ ಬಾಳಿದ್ದಳು. 37 ಅವಳು ಎಂಬತ್ತನಾಲ್ಕು ವರ್ಷ ವಿಧವೆಯಾಗಿದ್ದು, ದೇವಾಲಯವನ್ನು ಬಿಟ್ಟುಹೋಗದೆ ಉಪವಾಸಗಳಿಂದಲೂ ಪ್ರಾರ್ಥನೆಗಳಿಂದಲೂ ರಾತ್ರಿ ಹಗಲೂ ಆರಾಧನೆ ಮಾಡುತ್ತಿದ್ದಳು. 38 ಆ ಸಂದರ್ಭದಲ್ಲಿ ಅನ್ನಳು ಬಂದು, ದೇವರನ್ನು ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಶಿಶುವಿನ ವಿಷಯವಾಗಿ ಮಾತನಾಡಿದಳು.