25 ಆಗ ಸಿಮೆಯೋನನೆಂಬ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಅವನು ನೀತಿವಂತನೂ ಭಕ್ತನೂ ಆಗಿದ್ದನು. ಅವನು ಇಸ್ರಾಯೇಲರನ್ನು ಸಂತೈಸುವ ಒಬ್ಬರ ಬರುವಿಕೆಗಾಗಿ ಕಾಯುತ್ತಿದ್ದನು. ಪವಿತ್ರಾತ್ಮ ದೇವರ ಪ್ರಸನ್ನತೆ ಅವನ ಮೇಲಿತ್ತು. 26 ಇದಲ್ಲದೆ, ಅವನು ಕರ್ತದೇವರು ಕಳುಹಿಸಲಿರುವ ಕ್ರಿಸ್ತನನ್ನು2:26 ಕ್ರಿಸ್ತ ಯೆಹೂದ್ಯರು ನಿರೀಕ್ಷಿಸುತ್ತಿದ್ದ ವಿಮೋಚಕನು ಕಾಣುವುದಕ್ಕಿಂತ ಮುಂಚೆ ಮರಣ ಹೊಂದುವುದಿಲ್ಲವೆಂದು ಪವಿತ್ರಾತ್ಮನಿಂದ ಅವನಿಗೆ ಪ್ರಕಟನೆಯಾಗಿತ್ತು. 27 ಅವನು ಪವಿತ್ರಾತ್ಮ ಪ್ರೇರಣೆಯಿಂದ ದೇವಾಲಯದ ಅಂಗಳದೊಳಗೆ ಬಂದನು, ಆಗ ನಿಯಮವನ್ನು ಪೂರೈಸಲು ತಂದೆತಾಯಿಗಳು ಶಿಶು ಯೇಸುವನ್ನು ಒಳಗೆ ತಂದರು. 28 ಆಗ ಸಿಮೆಯೋನನು ಶಿಶುವನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದೇವರನ್ನು ಕೊಂಡಾಡುತ್ತಾ ಹೀಗೆಂದನು:
29 "ಸರ್ವೇಶ್ವರರಾದ ಕರ್ತದೇವರೇ, ನಿಮ್ಮ ವಾಗ್ದಾನದ ಪ್ರಕಾರ,
ನಿಮ್ಮ ದಾಸನನ್ನು ಸಮಾಧಾನದಿಂದ ಈಗ ಕಳುಹಿಸಿರಿ.
30 ನನ್ನ ಕಣ್ಣುಗಳು ನಿಮ್ಮ ರಕ್ಷಣೆಯನ್ನು ಕಂಡವು,
31 ಈ ರಕ್ಷಣೆಯನ್ನು ನೀವು ಎಲ್ಲಾ ಜನಗಳ ಮುಂದೆ ಸಿದ್ಧಪಡಿಸಿದ್ದೀರಿ:
32 ಅದು ಯೆಹೂದ್ಯರಲ್ಲದವರಿಗೆ ಪ್ರಕಟಣೆಯ ಬೆಳಕೂ,
ನಿಮ್ಮ ಪ್ರಜೆಯಾದ ಇಸ್ರಾಯೇಲರ ಮಹಿಮೆಯೂ ಆಗಿದೆ."