ಪ್ರಥಮ ಶಿಷ್ಯರನ್ನು ಕರೆದದ್ದು
1 ಒಂದು ದಿನ ಯೇಸು ಗೆನೆಜರೇತ್5:1 ಅಂದರೆ, ಗಲಿಲಾಯ ಸರೋವರ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ, ಜನರು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಅವರ ಸುತ್ತಲೂ ಗುಂಪಾಗಿ ಕೂಡಿದ್ದರು. 2 ಯೇಸು ಕೆರೆಯ ಬಳಿಯಲ್ಲಿ ಎರಡು ದೋಣಿಗಳನ್ನು ಕಂಡರು. ಅಲ್ಲಿ ಬೆಸ್ತರು ಅವುಗಳಿಂದ ಹೊರಗೆ ಹೋಗಿ ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. 3 ಅವುಗಳಲ್ಲಿ ಸೀಮೋನನ ದೋಣಿಯನ್ನು, ಯೇಸು ಹತ್ತಿ ಅದನ್ನು ದಡದಿಂದ ಸ್ವಲ್ಪ ದೂರ ನೂಕಬೇಕೆಂದು ಅವನನ್ನು ಕೇಳಿಕೊಂಡರು. ಆಮೇಲೆ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಜನರಿಗೆ ಬೋಧಿಸಿದರು.
4 ಅವರು ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, "ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ, ಮೀನು ಹಿಡಿಯುವುದಕ್ಕೆ ನಿಮ್ಮ ಬಲೆಗಳನ್ನು ಬೀಸಿರಿ," ಎಂದರು.
5 ಅದಕ್ಕೆ ಉತ್ತರವಾಗಿ ಸೀಮೋನನು ಯೇಸುವಿಗೆ, "ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ. ಆದರೂ ನಿಮ್ಮ ಮಾತಿನಂತೆ ನಾನು ಬಲೆಯನ್ನು ಬೀಸುತ್ತೇನೆ," ಎಂದು ಹೇಳಿದನು.
6 ಅವರು ಅದರಂತೆ ಬಲೆ ಹಾಕಿದಾಗ, ಮೀನಿನ ದೊಡ್ಡ ರಾಶಿಯನ್ನು ಹಿಡಿದರು ಅವರ ಬಲೆಯು ಹರಿಯುವಂತಾಯಿತು. 7 ಆಗ ಬೇರೆ ದೋಣಿಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆಮಾಡಿದರು. ಪಾಲುಗಾರರು ಬಂದು ಎರಡು ದೋಣಿಗಳನ್ನು ತುಂಬಿಸಲಾಗಿ ಅವು ಮುಳುಗಲಾರಂಭಿಸಿದವು.
8 ಸೀಮೋನ್ ಪೇತ್ರನು ಇದನ್ನು ಕಂಡಾಗ, ಯೇಸುವಿನ ಮುಂದೆ ಮೊಣಕಾಲೂರಿ, "ಸ್ವಾಮಿ, ನನ್ನನ್ನು ಬಿಟ್ಟು ಹೋಗಿರಿ, ನಾನು ಪಾಪಿ," ಎಂದನು. 9 ಯಾಕಂದರೆ, ಅವರು ಹಿಡಿದ ಮೀನುಗಳ ರಾಶಿಯನ್ನು ಕಂಡು ಅವನೂ ಅವನ ಸಂಗಡ ಇದ್ದವರೂ ವಿಸ್ಮಯಗೊಂಡಿದ್ದರು. 10 ಸೀಮೋನನ ಕೂಡ ಪಾಲುಗಾರರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ, ಯೋಹಾನರೂ ಹಾಗೆಯೇ ವಿಸ್ಮಯಗೊಂಡಿದ್ದರು.
ಆಗ ಯೇಸು ಸೀಮೋನನಿಗೆ, "ಹೆದರಬೇಡ; ಇಂದಿನಿಂದ ನೀನು ದೇವರಿಗಾಗಿ ಮನುಷ್ಯರನ್ನೇ ಹಿಡಿಯುವವನಾಗಿರುವೆ,5:10 ಅಂದರೆ, ಸುವಾರ್ತೆಯನ್ನು ಹೇಳಿ ಜನರನ್ನು ಯೇಸುವಿನ ಹಿಂಬಾಲಕರಾಗಿ ಮಾಡುವುದು" ಎಂದರು. 11 ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನು ಬಿಟ್ಟು, ಯೇಸುವನ್ನೇ ಹಿಂಬಾಲಿಸಿದರು.