ಶತಾಧಿಪತಿಯ ವಿಶ್ವಾಸ
1 ತಮ್ಮ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ, ಯೇಸು ಕಪೆರ್ನೌಮಿಗೆ ಪ್ರವೇಶಿಸಿದರು. 2 ಆಗ ಒಬ್ಬ ಶತಾಧಿಪತಿಗೆ,7:2 ಶತಾಧಿಪತಿ ನೂರು ಮಂದಿ ಸೈನಿಕರಿಗೆ ಅಧಿಪತಿ ಪ್ರಿಯನಾಗಿದ್ದ ಸೇವಕ, ಅಸ್ವಸ್ಥನಾಗಿ ಸಾಯುವುದರಲ್ಲಿದ್ದನು. 3 ಅವನು ಯೇಸುವಿನ ವಿಷಯ ಕೇಳಿದಾಗ, ಬಂದು ತನ್ನ ಸೇವಕನನ್ನು ಗುಣಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಅವರ ಬಳಿಗೆ ಕಳುಹಿಸಿದನು. 4 ಅವರು ಯೇಸುವಿನ ಬಳಿಗೆ ಬಂದು ಅವರಿಗೆ, "ನೀವು ಇದನ್ನು ಮಾಡುವುದಕ್ಕೆ ಅವನು ಯೋಗ್ಯನು, 5 ಏಕೆಂದರೆ ಅವನು ನಮ್ಮ ಜನಾಂಗವನ್ನು ಪ್ರೀತಿಸುವುದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ," ಎಂದು ಆಸಕ್ತಿಯಿಂದ ಬೇಡಿಕೊಂಡರು. 6 ಯೇಸು ಅವರೊಂದಿಗೆ ಹೋದರು.
ಅವರು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗಲೇ ಶತಾಧಿಪತಿಯು ಸ್ನೇಹಿತರನ್ನು ಯೇಸುವಿನ ಬಳಿಗೆ ಕಳುಹಿಸಿ, "ಕರ್ತದೇವರೇ, ನಿಮ್ಮನ್ನು ತೊಂದರೆ ಪಡಿಸಿಕೊಳ್ಳಬೇಡಿರಿ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ. 7 ನಾನು ನಿಮ್ಮ ಬಳಿಗೆ ಬರುವುದಕ್ಕೆ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು. 8 ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು,’ ಎಂದರೆ ಅವನು ಹೋಗುತ್ತಾನೆ, ಮತ್ತೊಬ್ಬನಿಗೆ ‘ಬಾ,’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ," ಎಂದು ಹೇಳಿ ಕಳುಹಿಸಿದನು.
9 ಯೇಸು ಅವನ ಈ ಮಾತುಗಳನ್ನು ಕೇಳಿದಾಗ, ಆಶ್ಚರ್ಯಪಟ್ಟು ತಿರುಗಿಕೊಂಡು ತಮ್ಮನ್ನು ಹಿಂಬಾಲಿಸುತ್ತಿದ್ದ ಗುಂಪಿಗೆ, "ನಾನು ನಿಮಗೆ ಹೇಳುವುದೇನೆಂದರೆ, ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲ್ ಜನರಲ್ಲಿಯೂ ಸಹ ಕಾಣಲಿಲ್ಲ," ಎಂದರು. 10 ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಅಸ್ವಸ್ಥನಾಗಿದ್ದ ಆ ಸೇವಕ ಸ್ವಸ್ಥನಾಗಿರುವುದನ್ನು ಕಂಡರು.