12 ಸಂಜೆಯಾಗುತ್ತಿದ್ದಾಗ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, "ಈ ಜನಸಮೂಹವು ಸುತ್ತಲಿರುವ ಊರುಗಳಿಗೂ ಸೀಮೆಗಳಿಗೂ ಹೋಗಿ ಊಟವಸತಿಯನ್ನು ದೊರಕಿಸಿಕೊಳ್ಳುವಂತೆ ಅವರನ್ನು ಕಳುಹಿಸಿಬಿಡಿ. ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲ," ಎಂದರು.
13 ಆದರೆ ಯೇಸು ಅವರಿಗೆ, "ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ," ಎಂದರು.
ಅದಕ್ಕೆ ಅವರು, "ನಮ್ಮಲ್ಲಿ ಐದು ರೊಟ್ಟಿ ಎರಡು ಮೀನುಗಳಿಗಿಂತ ಹೆಚ್ಚೇನು ಇಲ್ಲ. ನಾವು ಹೋಗಿ ಈ ಜನರಿಗೆ ಬೇಕಾಗುವಷ್ಟು ಆಹಾರವನ್ನು ಕೊಂಡುಕೊಂಡು ಬರಬೇಕೆ?" ಎಂದರು. 14 ಅಲ್ಲಿ ಹೆಚ್ಚು ಕಡಿಮೆ ಗಂಡಸರೇ ಐದು ಸಾವಿರ ಮಂದಿ ಇದ್ದರು.
ಆಗ ಯೇಸು ತಮ್ಮ ಶಿಷ್ಯರಿಗೆ, "ಪಂಕ್ತಿಗಳಲ್ಲಿ ಐವತ್ತರಂತೆ ಅವರನ್ನು ಕೂರಿಸಿರಿ," ಎಂದರು. 15 ಅವರು ಹಾಗೆಯೇ ಮಾಡಿ, ಎಲ್ಲರನ್ನೂ ಕುಳ್ಳಿರಿಸಿದರು. 16 ತರುವಾಯ ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ಅವುಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು. 17 ಅವರೆಲ್ಲರೂ ತಿಂದು ತೃಪ್ತರಾದರು. ಶಿಷ್ಯರು ಉಳಿದ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿಗಳು ತುಂಬಿದವು.