3 ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಅಲ್ಲಿಗೆ ಬಂದರು. 4 ಜನರ ಗುಂಪಿನ ನಿಮಿತ್ತ ಅವನನ್ನು ಯೇಸುವಿನ ಬಳಿಗೆ ತರಲು ಸಾಧ್ಯವಾಗದೆ ಹೋಯಿತು. ಆದ್ದರಿಂದ ಅವರು ಯೇಸು ಇದ್ದ ಕಡೆ ಮನೆಯ ಮೇಲ್ಚಾವಣಿಯನ್ನು ಒಡೆದು ತೆರೆದು, ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು. 5 ಯೇಸು ಅವರ ನಂಬಿಕೆಯನ್ನು ಕಂಡು, ಆ ಪಾರ್ಶ್ವವಾಯು ರೋಗಿಗೆ, "ಮಗನೇ, ನಿನ್ನ ಪಾಪಗಳು ಕ್ಷಮಿಸಲಾಗಿವೆ," ಎಂದರು.
6 ಅಲ್ಲಿ ಕುಳಿತಿದ್ದ ಕೆಲವು ನಿಯಮ ಬೋಧಕರು, 7 "ಈತನು ಏಕೆ ಹೀಗೆ ಮಾತನಾಡುತ್ತಾನೆ? ಈತನು ದೇವದೂಷಣೆ ಮಾಡುತ್ತಿದ್ದಾನೆ! ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?" ಎಂದು ತಮ್ಮೊಳಗೇ ಆಲೋಚಿಸಿಕೊಳ್ಳುತ್ತಿದ್ದರು.
8 ಯೇಸು ಅವರು ಯೋಚಿಸುತ್ತಿರುವುದನ್ನು ಕೂಡಲೇ ತಮ್ಮ ಆತ್ಮದಲ್ಲಿ ಗ್ರಹಿಸಿಕೊಂಡು ಅವರಿಗೆ, "ನೀವು ನಿಮ್ಮ ಮನಸ್ಸಿನಲ್ಲಿ ಹೀಗೆ ಆಲೋಚಿಸುವುದೇಕೆ? 9 ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ,’ ಎಂದು ಹೇಳುವುದೋ? 10 ಆದರೆ ಮನುಷ್ಯಪುತ್ರನಾದ2:10 ಮನುಷ್ಯಪುತ್ರ ಎಂಬುದು ಯೇಸುವನ್ನು ಸೂಚಿಸುತ್ತದೆ. ಯೇಸು ಈ ರೀತಿಯಾಗಿ ತಮ್ಮ ಬಗ್ಗೆ ಮಾತನಾಡುತ್ತಿದ್ದರು. ನನಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು," ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ, 11 "ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ," ಎಂದರು. 12 ಕೂಡಲೇ ಅವನು ಎದ್ದು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಆಗ ಎಲ್ಲರು ವಿಸ್ಮಯಗೊಂಡು, "ಇಂಥದ್ದನ್ನು ನಾವು ಹಿಂದೆಂದೂ ಕಂಡಿರಲಿಲ್ಲ!" ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.