ಕಿವುಡ ಮತ್ತು ಮೂಕನನ್ನು ಗುಣಪಡಿಸಿದ್ದು
31 ಆಮೇಲೆ ಯೇಸು ಟೈರ್ ಪಟ್ಟಣದ ಸಮೀಪವಿದ್ದ ಪ್ರದೇಶದಿಂದ ಹೊರಟು ಸೀದೋನಿನ ಮಾರ್ಗವಾಗಿ ಗಲಿಲಾಯ ಸರೋವರ ತೀರವನ್ನು ಹಾದು ದೆಕಪೊಲಿ7:31 ಅಂದರೆ, ಹತ್ತು ಪಟ್ಟಣಗಳು ಪ್ರದೇಶಕ್ಕೆ ಬಂದರು. 32 ಅಲ್ಲಿ ಕೆಲವರು ಮಾತನಾಡಲಾಗದ ಒಬ್ಬ ಕಿವುಡನನ್ನು ಕರೆದುಕೊಂಡು ಬಂದು ಅವನ ಮೇಲೆ ಕೈಯಿಡಬೇಕೆಂದು ಯೇಸುವನ್ನು ಬೇಡಿಕೊಂಡರು.
33 ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ತಮ್ಮ ಬೆರಳುಗಳನ್ನು ಅವನ ಕಿವಿಯೊಳಗಿಟ್ಟು ಅನಂತರ ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದರು. 34 ಯೇಸು ಸ್ವರ್ಗದ ಕಡೆಗೆ ನೋಡಿ, ದೀರ್ಘವಾಗಿ ನಿಟ್ಟುಸಿರುಬಿಟ್ಟು ಅವನಿಗೆ "ಎಪ್ಫಥಾ!" ಎಂದರು. "ತೆರೆಯಲಿ!" ಎಂಬುದು ಅದರ ಅರಮೀಯ ಅರ್ಥ. 35 ಕೂಡಲೇ ಅವನ ಕಿವಿಗಳು ತೆರೆದವು; ಅವನ ನಾಲಿಗೆಯು ಸಡಿಲವಾಯಿತು. ಅವನು ಸ್ಪಷ್ಟವಾಗಿ ಮಾತನಾಡಲಾರಂಭಿಸಿದನು.
36 ಯಾವ ಮನುಷ್ಯನಿಗೂ ಇದನ್ನು ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು. ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಅದನ್ನು ಮತ್ತಷ್ಟೂ ಹೆಚ್ಚಾಗಿ ಪ್ರಚಾರಮಾಡಿದರು. 37 ಜನರು ಅತ್ಯಂತ ಆಶ್ಚರ್ಯಪಟ್ಟು, "ಯೇಸು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ. ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರೆ," ಎಂದುಕೊಳ್ಳುತ್ತಿದ್ದರು.