ಪೂರ್ವದೇಶದ ಜ್ಞಾನಿಗಳ ಭೇಟಿ
1 ಹೆರೋದ ರಾಜನ ಕಾಲದಲ್ಲಿ, ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಜನಿಸಿದಾಗ, ಪೂರ್ವ ದೇಶದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು, 2 "ಯೆಹೂದ್ಯರ ಅರಸರಾಗಿ ಹುಟ್ಟಿದವರು ಎಲ್ಲಿ? ನಾವು ಅವರನ್ನು ಸೂಚಿಸುವ ನಕ್ಷತ್ರವನ್ನು ಪೂರ್ವದೇಶದಲ್ಲಿ ಕಂಡು ಅವರನ್ನು ಆರಾಧಿಸಲು ಬಂದಿದ್ದೇವೆ," ಎಂದರು.
3 ಇದನ್ನು ಕೇಳಿ ಹೆರೋದ ರಾಜನು ಮತ್ತು ಯೆರೂಸಲೇಮಿನ ಜನರೆಲ್ಲರು ಕಳವಳಗೊಂಡರು. 4 ರಾಜನು ಯೆಹೂದ್ಯರ ಮುಖ್ಯಯಾಜಕರನ್ನೂ ನಿಯಮ ಬೋಧಕರನ್ನೂ ಕರೆದು, "ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ?" ಎಂದು ಅವರನ್ನು ವಿಚಾರಿಸಿದನು. 5 ಅದಕ್ಕೆ ಅವರು, "ಯೂದಾಯ ಪ್ರಾಂತದ ಬೇತ್ಲೆಹೇಮಿನಲ್ಲಿಯೇ," ಏಕೆಂದರೆ, ಪ್ರವಾದಿಯು ಬರೆದಿರುವದು ಈ ರೀತಿಯಾಗಿದೆ:
6 " ‘ಯೆಹೂದ ಪ್ರಾಂತದಲ್ಲಿರುವ ಬೇತ್ಲೆಹೇಮೇ,
ಯೆಹೂದದ ಅಧಿಪತಿಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಅಲ್ಪವಲ್ಲ.
ಏಕೆಂದರೆ ನನ್ನ ಪ್ರಜೆಗಳಾದ ಇಸ್ರಾಯೇಲನ್ನು
ಪರಿಪಾಲಿಸಲು ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಬರುವನು,’2:6 ಮೀಕ 5:2,4"
ಎಂದು ಹೇಳಿದರು.
7 ಆಗ ಹೆರೋದನು ಆ ಜ್ಞಾನಿಗಳನ್ನು ರಹಸ್ಯವಾಗಿ ಕರೆದು, ಆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸೂಕ್ಷ್ಮವಾಗಿ ವಿಚಾರಿಸಿದನು. 8 "ನೀವು ಹೋಗಿ ಆ ಮಗುವಿನ ವಿಷಯ ಜಾಗರೂಕತೆಯಿಂದ ವಿಚಾರಿಸಿ. ಆ ಮಗು ಸಿಕ್ಕಿದ ಮೇಲೆ ನನಗೆ ತಿಳಿಸಿರಿ, ಆಗ ನಾನೂ ಬಂದು ಅದನ್ನು ಆರಾಧಿಸುವೆನು," ಎಂದು ಹೇಳಿ ಅವರನ್ನು ಬೇತ್ಲೆಹೇಮಿಗೆ ಕಳುಹಿಸಿದನು.
9 ರಾಜನ ಮಾತನ್ನು ಕೇಳಿ ಅವರು ಹೊರಟಾಗ, ಪೂರ್ವದೇಶದಲ್ಲಿ ಅವರು ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು, ಅವರ ಮುಂದೆ ಮುಂದೆ ಸಾಗುತ್ತಾ, ಆ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತಿತು. 10 ಅವರು ನಕ್ಷತ್ರವನ್ನು ಕಂಡು, ಬಹಳವಾಗಿ ಸಂತೋಷಪಟ್ಟರು. 11 ಜ್ಞಾನಿಗಳು ಮನೆಯನ್ನು ಪ್ರವೇಶಿಸಿ, ಮಗುವನ್ನು ತಾಯಿ ಮರಿಯಳ ಬಳಿ ಕಂಡು, ಮಗುವಿಗೆ ಅಡ್ಡಬಿದ್ದು ಆರಾಧಿಸಿದರು. ತಮ್ಮ ಬೊಕ್ಕಸಗಳನ್ನು ತೆರೆದು ಮಗುವಿಗೆ ಚಿನ್ನ, ಧೂಪ ಮತ್ತು ರಕ್ತಬೋಳಗಳನ್ನು2:11 ರಕ್ತಬೋಳ ಒಂದು ವಿಧವಾದ ಅರಬ್ ದೇಶದ ಮರದ ರಸಗಂಧ ಕಾಣಿಕೆಯಾಗಿ ಸಮರ್ಪಿಸಿದರು. 12 ಅನಂತರ ಅವರು ಕನಸಿನಲ್ಲಿ ಹೆರೋದನ ಬಳಿಗೆ ಹಿಂತಿರುಗಬಾರದೆಂಬ ಎಚ್ಚರಿಕೆಯನ್ನು ಹೊಂದಿದ್ದರಿಂದ, ಬೇರೆ ದಾರಿಯಿಂದ ತಮ್ಮ ದೇಶಕ್ಕೆ ಹೊರಟು ಹೋದರು.