ಪುನರುತ್ಥಾನದಲ್ಲಿ ಮದುವೆ ಬಗ್ಗೆ ಪ್ರಶ್ನೆ
23 ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಯೇಸುವಿನ ಬಳಿಗೆ ಬಂದು, 24 "ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ವಿಧವೆಯನ್ನು ಮದುವೆಯಾಗಿ ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ. 25 ಹೀಗಿರಲಾಗಿ ನಮ್ಮಲ್ಲಿ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಮಾಡಿಕೊಂಡು ಸತ್ತನು. ಸಂತಾನವಿಲ್ಲದ ಕಾರಣ ತನ್ನ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು. 26 ಅದರಂತೆಯೇ ಎರಡನೆಯವನು ಮತ್ತು ಮೂರನೆಯವನು ಹೀಗೆ ಏಳನೆಯವನವರೆಗೂ ಸಂಭವಿಸಿತು. 27 ಕಡೆಯದಾಗಿ, ಆ ಸ್ತ್ರೀಯೂ ಸತ್ತಳು. 28 ಆದ್ದರಿಂದ, ಪುನರುತ್ಥಾನದ ಜೀವನದಲ್ಲಿ, ಆ ಏಳುಮಂದಿಯಲ್ಲಿ ಆಕೆ ಯಾರಿಗೆ ಹೆಂಡತಿಯಾಗಿರುವಳು? ಏಕೆಂದರೆ ಅವರೆಲ್ಲರೂ ಆಕೆಯನ್ನು ಮದುವೆ ಮಾಡಿಕೊಂಡಿದ್ದರಲ್ಲಾ?" ಎಂದು ಕೇಳಿದರು.
29 ಅದಕ್ಕೆ ಯೇಸು ಉತ್ತರವಾಗಿ, "ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದೀರಿ. 30 ಏಕೆಂದರೆ ಪುನರುತ್ಥಾನದ ಜೀವನದಲ್ಲಿ ಅವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. 31 ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ, 32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಆಗಿದ್ದೇನೆ,’22:32 ವಿಮೋ 3:6 ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ," ಎಂದು ಹೇಳಿದರು.
33 ಜನಸಮೂಹದವರು ಇದನ್ನು ಕೇಳಿದಾಗ, ಯೇಸುವಿನ ಬೋಧನೆಗೆ ವಿಸ್ಮಯಗೊಂಡರು.