ಕುರಿ ಆಡುಗಳ ಸಾಮ್ಯ
31 "ಮನುಷ್ಯಪುತ್ರನಾದ ನಾನು ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ, ನನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವೆನು. 32 ನನ್ನ ಮುಂದೆ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಲಾಗುವುದು. ಆಗ ಕುರುಬನು ತನ್ನ ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ನಾನು ಅವರನ್ನು ಪ್ರತ್ಯೇಕಿಸುವೆನು. 33 ನಾನು ಕುರಿಗಳನ್ನು ನನ್ನ ಬಲಗಡೆಯಲ್ಲಿಯೂ ಆಡುಗಳನ್ನು ಎಡಗಡೆಯಲ್ಲಿಯೂ ನಿಲ್ಲಿಸುವೆನು.
34 "ಆಗ ನಾನು ನನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ಬನ್ನಿರಿ, ಭೂಲೋಕಕ್ಕೆ ಅಸ್ತಿವಾರ ಹಾಕಿದ ದಿನದಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಆಸ್ತಿಯನ್ನಾಗಿ ಹೊಂದಿರಿ. 35 ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಟ್ಟಿರಿ. 36 ನಾನು ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿದಿರಿ. ನಾನು ಅಸ್ವಸ್ಥನಾಗಿದ್ದೆನು, ನೀವು ನನ್ನನ್ನು ಉಪಚರಿಸಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ,’ ಎಂದು ಹೇಳುವೆನು.
37 "ಆಗ ಆ ನೀತಿವಂತರು ಉತ್ತರವಾಗಿ ನನಗೆ, ‘ಕರ್ತನೇ, ನೀನು ಯಾವಾಗ ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವುದಕ್ಕೆ ಕೊಟ್ಟೆವು? 38 ನೀನು ಪರದೇಶಿಯಾಗಿರುವುದನ್ನು ನಾವು ಯಾವಾಗ ಕಂಡು ನಿನಗೆ ಆಶ್ರಯ ಕೊಟ್ಟೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು? 39 ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನ ಬಳಿಗೆ ಬಂದೆವು?’ ಎಂದು ಕೇಳುವರು.
40 "ಅದಕ್ಕೆ ನಾನು ಉತ್ತರವಾಗಿ ಅವರಿಗೆ, ‘ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ನೀವು ಈ ನನ್ನ ಸಹೋದರರಲ್ಲಿ ಅತ್ಯಲ್ಪನಾದವನೊಬ್ಬನಿಗೆ, ಮಾಡಿದ್ದು ನನಗೇ ಮಾಡಿದಂತಾಯಿತು,’ ಎನ್ನುವೆನು.
41 "ನಾನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. 42 ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದವನಾಗಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ. 43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಳ್ಳಲಿಲ್ಲ. ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ. ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂದರ್ಶಿಸಲಿಲ್ಲ,’ ಎಂದು ಹೇಳುವೆನು.
44 "ಆಗ ಅವರು ಸಹ ಉತ್ತರವಾಗಿ ನನಗೆ, ‘ಕರ್ತನೇ, ನೀನು ಹಸಿದಿದ್ದನ್ನೂ ಬಾಯಾರಿದ್ದನ್ನೂ ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥನಾಗಿದ್ದದ್ದನ್ನೂ ಸೆರೆಯಲ್ಲಿದ್ದದ್ದನ್ನೂ ನಾವು ಯಾವಾಗ ನೋಡಿ ನಿನಗೆ ಉಪಚಾರಮಾಡಲಿಲ್ಲ?’ ಎಂದು ಕೇಳುವರು.
45 "ಆಗ ನಾನು ಅವರಿಗೆ ಉತ್ತರವಾಗಿ, ‘ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ನೀವು ಇವರಲ್ಲಿ ಅತ್ಯಲ್ಪನಾದ ಒಬ್ಬನಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡಲಿಲ್ಲ,’ ಎಂದು ಹೇಳುವೆನು.
46 "ಹೀಗೆ ಇವರು ನಿತ್ಯವಾದ ಶಿಕ್ಷೆಗೆ ಒಳಗಾಗುವರು. ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು," ಎಂದು ಹೇಳುವೆನು.