ಯೇಸುವಿನ ವಿರುದ್ಧ ಪಿತೂರಿ
1 ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತಮ್ಮ ಶಿಷ್ಯರಿಗೆ, 2 "ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಇರುವುದೆಂದು ನೀವು ಬಲ್ಲಿರಿ. ಆಗ ಮನುಷ್ಯಪುತ್ರನಾದ ನನ್ನನ್ನು ಶಿಲುಬೆಗೆ ಹಾಕಲು ಹಿಡಿದುಕೊಡುವರು," ಎಂದರು.
3 ಆಗ ಮುಖ್ಯಯಾಜಕರೂ ಜನರ ಹಿರಿಯರೂ ಒಟ್ಟಾಗಿ ಸೇರಿ, ಕಾಯಫನೆಂಬ ಮಹಾಯಾಜಕನ ಅರಮನೆಗೆ ಬಂದು 4 ತಾವು ಕುಯುಕ್ತಿಯಿಂದ ಯೇಸುವನ್ನು ಹಿಡಿದು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು. 5 ಆದರೆ ಅವರು, "ಜನರಲ್ಲಿ ಗದ್ದಲವಾದೀತು, ಹಬ್ಬದಲ್ಲಿ ಬೇಡ," ಎಂದರು.
ಬೇಥಾನ್ಯದಲ್ಲಿ ಯೇಸು
6 ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿದ್ದರು. 7 ಯೇಸು ಅಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸುಗಂಧ ತೈಲದ ಭರಣಿಯೊಂದಿಗೆ ಯೇಸುವಿನ ಬಳಿಗೆ ಬಂದು, ಅದನ್ನು ಅವರ ತಲೆಯ ಮೇಲೆ ಸುರಿದಳು.
8 ಯೇಸುವಿನ ಶಿಷ್ಯರು ಇದನ್ನು ಕಂಡು ಕೋಪಗೊಂಡು, "ಏಕೆ ಈ ವ್ಯರ್ಥ ಖರ್ಚು? 9 ಈ ತೈಲವನ್ನು ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?" ಎಂದರು.
10 ಯೇಸು ಅದನ್ನು ತಿಳಿದವರಾಗಿ ಅವರಿಗೆ, "ನೀವು ಏಕೆ ಈ ಸ್ತ್ರೀಗೆ ತೊಂದರೆಪಡಿಸುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. 11 ಬಡವರು ಯಾವಾಗಲೂ ನಿಮ್ಮ ಸಂಗಡ ಇರುತ್ತಾರೆ.26:11 ಧರ್ಮೋ 15:11 ಆದರೆ ನಾನು ಯಾವಾಗಲೂ ನಿಮ್ಮ ಸಂಗಡ ಇರುವುದಿಲ್ಲ. 12 ಈಕೆ ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದರಿಂದ, ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ. 13 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಲೋಕದಾದ್ಯಂತ ಎಲ್ಲೆಲ್ಲಿ ಸುವಾರ್ತೆಯು ಸಾರಲಾಗುವದೋ, ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು," ಎಂದರು.
ಯೇಸುವನ್ನು ಹಿಡಿದುಕೊಡಲು ಯೂದನು ಒಪ್ಪಿದ್ದು
14 ಆಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದ ಇಸ್ಕರಿಯೋತ ಎಂಬುವನು ಮುಖ್ಯಯಾಜಕರ ಬಳಿಗೆ ಹೋಗಿ, 15 "ನಾನು ಆತನನ್ನು ನಿಮಗೆ ಒಪ್ಪಿಸಿಕೊಟ್ಟರೆ ನೀವು ನನಗೆ ಏನು ಕೊಡುತ್ತೀರಿ?" ಎಂದನು. ಆಗ ಅವರು ಅವನಿಗೆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಎಣಿಸಿ ಕೊಟ್ಟರು. 16 ಅಂದಿನಿಂದ ಯೂದನು ಯೇಸುವನ್ನು ಹಿಡಿದುಕೊಡುವುದಕ್ಕೆ ಸಂದರ್ಭವನ್ನು ಕಾಯುತ್ತಿದ್ದನು.
ಕರ್ತನ ಭೋಜನ
17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, "ನೀವು ಪಸ್ಕದ ಊಟ ಮಾಡಲು ನಾವು ನಿಮಗಾಗಿ ಎಲ್ಲಿ ಸಿದ್ಧಮಾಡಬೇಕೆಂದು ಬಯಸುತ್ತೀರಿ?" ಎಂದು ಕೇಳಿದರು.
18 ಅದಕ್ಕೆ ಯೇಸು, "ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ, ‘ನನ್ನ ಸಮಯವು ಸಮೀಪವಾಗಿದೆ. ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕರು ಕೇಳುತ್ತಾರೆ’ ಎಂಬುದಾಗಿ ಅವನಿಗೆ ಹೇಳಿರಿ," ಎಂದರು. 19 ಯೇಸು ಅವರಿಗೆ ಆಜ್ಞಾಪಿಸಿದಂತೆ ಶಿಷ್ಯರು ಪಸ್ಕವನ್ನು ಸಿದ್ಧಮಾಡಿದರು.
20 ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತುಕೊಂಡರು. 21 ಅವರು ಊಟಮಾಡುತ್ತಿದ್ದಾಗ ಯೇಸು, "ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು," ಎಂದರು.
22 ಆಗ ಅವರು ದುಃಖಪಟ್ಟು, "ಕರ್ತನೇ, ಅವನು ನಾನಲ್ಲವಲ್ಲಾ?" ಎಂದು ಅವರಲ್ಲಿ ಪ್ರತಿಯೊಬ್ಬರೂ ಯೇಸುವನ್ನು ಕೇಳಲಾರಂಭಿಸಿದರು.
23 ಅದಕ್ಕೆ ಯೇಸು ಉತ್ತರವಾಗಿ, "ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದಿದವನೇ ನನಗೆ ದ್ರೋಹ ಮಾಡುವನು. 24 ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತೇನೆ. ಆದರೆ ಮನುಷ್ಯಪುತ್ರನಾದ ನನಗೆ ಯಾವನು ದ್ರೋಹಬಗೆಯುತ್ತಾನೋ ಆ ಮನುಷ್ಯನಿಗೆ ಕಷ್ಟ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಎಷ್ಟೋ ಒಳ್ಳೆಯದಾಗುತ್ತಿತ್ತು," ಎಂದರು.
25 ಆಗ ಯೇಸುವನ್ನು ಹಿಡಿದುಕೊಡಬೇಕೆಂದಿದ್ದ ಯೂದನು, "ಗುರುವೇ, ಅವನು ನಾನಲ್ಲವಲ್ಲಾ?" ಎಂದನು.
"ನೀನೇ ಹೇಳಿದ್ದೀ," ಎಂದು ಯೇಸು ಉತ್ತರಕೊಟ್ಟರು.
26 ಅವರು ಊಟಮಾಡುತ್ತಿರುವಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ, ಮುರಿದು ತಮ್ಮ ಶಿಷ್ಯರಿಗೆ ಕೊಟ್ಟು, "ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ," ಎಂದರು.
27 ಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತುತಿ ಮಾಡಿ ಅವರಿಗೆ ಕೊಟ್ಟು, "ನೀವೆಲ್ಲರೂ ಇದರಲ್ಲಿರುವುದನ್ನು ಕುಡಿಯಿರಿ. 28 ಇದು ಬಹುಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲಾಗುವ ಹೊಸ ಒಡಂಬಡಿಕೆಯ ನನ್ನ ರಕ್ತ.