ಯೇಸುವಿನ ಶೋಧನೆ
1 ಆಮೇಲೆ ಸೈತಾನನಿಂದ ಶೋಧಿತರಾಗಲೆಂದು ಪವಿತ್ರಾತ್ಮರು ಯೇಸುವನ್ನು ಅರಣ್ಯಕ್ಕೆ ನಡೆಸಿದರು. 2 ನಲವತ್ತು ದಿನ ಹಗಲೂ ರಾತ್ರಿ ಉಪವಾಸವಿದ್ದ ಮೇಲೆ ಯೇಸುವಿಗೆ ಹಸಿವಾಯಿತು. 3 ಆಗ ಶೋಧಕನು ಯೇಸುವಿನ ಬಳಿ ಬಂದು, "ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲುಗಳು ರೊಟ್ಟಿಗಳಾಗುವಂತೆ ಆಜ್ಞಾಪಿಸು," ಎಂದನು.
4 ಅದಕ್ಕೆ ಯೇಸು, "ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಜೀವಿಸುತ್ತಾನೆ,’4:4 ಧರ್ಮೋ 8:3" ಎಂದರು.
5 ಆಮೇಲೆ ಸೈತಾನನು ಯೇಸುವನ್ನು ಪವಿತ್ರ ನಗರಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ, 6 "ನೀನು ದೇವರ ಪುತ್ರನಾಗಿದ್ದರೆ, ಕೆಳಕ್ಕೆ ಧುಮುಕು. ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ:
" ‘ದೇವರು ನಿನ್ನ ವಿಷಯವಾಗಿ ತಮ್ಮ ದೂತರಿಗೆ ಆಜ್ಞಾಪಿಸುವರು,
ನಿನ್ನ ಪಾದಗಳು ಕಲ್ಲಿಗೆ ತಗಲದಂತೆ
ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’4:6 ಕೀರ್ತನೆ 91:11,12"
ಎಂದನು.
7 ಅದಕ್ಕೆ ಯೇಸು, " ‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು’4:7 ಧರ್ಮೋ 6:16 ಎಂಬುದನ್ನು ಸಹ ಪವಿತ್ರ ವೇದದಲ್ಲಿ ಬರೆದಿದೆ," ಎಂದರು.
8 ಅನಂತರ ಸೈತಾನನು ಯೇಸುವನ್ನು ಬಹಳ ಎತ್ತರವಾದ ಪರ್ವತಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ಮಹಿಮೆಯನ್ನೂ ಅವರಿಗೆ ತೋರಿಸಿ, 9 "ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವೆಲ್ಲವನ್ನು ನಿನಗೆ ಕೊಡುವೆನು," ಎಂದನು.
10 ಯೇಸು ಅವನಿಗೆ, "ಸೈತಾನನೇ, ತೊಲಗು. ಏಕೆಂದರೆ, ‘ನಿನ್ನ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’4:10 ಧರ್ಮೋ 6:13 ಎಂದು ಪವಿತ್ರ ವೇದದಲ್ಲಿ ಬರೆದಿದೆ," ಎಂದರು.
11 ಆಗ ಸೈತಾನನು ಯೇಸುವನ್ನು ಬಿಟ್ಟುಹೋದನು. ದೇವದೂತರು ಬಂದು ಅವರಿಗೆ ಉಪಚಾರ ಮಾಡಿದರು.