ಸತ್ತ ಬಾಲಕಿ ಮತ್ತು ರೋಗಿಯಾದ ಸ್ತ್ರೀ
18 ಯೇಸು ಇದೆಲ್ಲವನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ, ಸಭಾಮಂದಿರದ ಒಬ್ಬ ಅಧಿಕಾರಿಯು ಬಂದು ಯೇಸುವಿನ ಮುಂದೆ ಮೊಣಕಾಲೂರಿ, "ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ನೀವು ಬಂದು ಆಕೆಯ ಮೇಲೆ ನಿಮ್ಮ ಕೈಯನ್ನಿಡಿರಿ; ಆಗ ಅವಳು ಬದುಕುವಳು," ಎಂದು ಹೇಳಿದನು. 19 ಯೇಸು ಎದ್ದು ತಮ್ಮ ಶಿಷ್ಯರೊಂದಿಗೆ ಆ ಅಧಿಕಾರಿಯ ಹಿಂದೆ ಹೋದರು.
20 ಆಗ ಅಲ್ಲಿ ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀಯು ಹಿಂಬದಿಯಿಂದ ಬಂದು, ಯೇಸುವಿನ ನಿಲುವಂಗಿಯ ಅಂಚನ್ನು ಮುಟ್ಟಿ, 21 "ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ಸಾಕು, ನನಗೆ ಗುಣವಾಗುವುದು," ಎಂದು ಆಕೆಯು ತನ್ನೊಳಗೆ ಹೇಳಿಕೊಂಡಳು.
22 ಯೇಸು ಹಿಂತಿರುಗಿ ಆಕೆಯನ್ನು ನೋಡಿ, "ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ," ಎಂದರು. ಆ ಗಳಿಗೆಯಲ್ಲೇ ಆ ಸ್ತ್ರೀಯು ಸ್ವಸ್ಥಳಾದಳು.
23 ತರುವಾಯ ಯೇಸು ಆ ಅಧಿಕಾರಿಯ ಮನೆಯೊಳಗೆ ಬಂದು ಕೊಳಲೂದುವವರನ್ನೂ ಜನರ ಗೊಂದಲವನ್ನೂ ಕಂಡು, 24 ಅವರಿಗೆ, "ಹೊರಗೆ ಹೋಗಿರಿ, ಬಾಲಕಿಯು ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ," ಎಂದರು. ಅದಕ್ಕವರು ನಕ್ಕು ಯೇಸುವನ್ನು ಹಾಸ್ಯಮಾಡಿದರು. 25 ಆದರೆ ಜನರನ್ನು ಹೊರಗೆ ಕಳುಹಿಸಿದ ಮೇಲೆ ಯೇಸು ಒಳಗೆ ಹೋಗಿ, ಬಾಲಕಿಯ ಕೈಯನ್ನು ಹಿಡಿದು ಎಬ್ಬಿಸಿದಾಗ ಬಾಲಕಿಯು ಎದ್ದಳು. 26 ಈ ಸಮಾಚಾರವು ನಾಡಿನಲ್ಲೆಲ್ಲಾ ಹರಡಿತು.