8 ಜನರು ಎದ್ದು ನಿಂತ ನಂತರ, ಅವರು ದೇವರ ನಿಯಮವನ್ನು ಸ್ಪಷ್ಟವಾಗಿ ಓದುತ್ತಾ, ಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು.
9 ರಾಜಪಾಲನಾದ ನೆಹೆಮೀಯನೂ, ನಿಯಮಶಾಸ್ತ್ರಿಯೂ, ಯಾಜಕನೂ ಆದ ಎಜ್ರನೂ, ಜನರನ್ನು ಬೋಧಿಸುತ್ತಿದ್ದ ಲೇವಿಯರೂ ಜನರೆಲ್ಲರಿಗೆ: "ಈ ದಿನವು ನಿಮ್ಮ ದೇವರಾಗಿರುವ ಯೆಹೋವ ದೇವರಿಗೆ ಪರಿಶುದ್ಧವಾದುದರಿಂದ ದುಃಖಿಸದೆ, ಅಳದೆ ಇರಿ," ಎಂದರು. ಏಕೆಂದರೆ ಜನರೆಲ್ಲರು ದೇವರ ನಿಯಮದ ಮಾತುಗಳನ್ನು ಕೇಳಿದಾಗ ಅತ್ತರು.
10 ಇದಲ್ಲದೆ ಎಜ್ರನು ಅವರಿಗೆ, "ನೀವು ಹೋಗಿ ಒಳ್ಳೆಯ ಆಹಾರವನ್ನು ತಿಂದು, ಸಿಹಿಯಾದದ್ದನ್ನು ಕುಡಿಯಿರಿ, ತಮಗಾಗಿ ಸಿದ್ಧಮಾಡಿಕೊಳ್ಳದವರಿಗೆ ಒಂದು ಪಾಲನ್ನು ಕಳುಹಿಸಿಕೊಡಿರಿ. ಈ ದಿನವು ನಮ್ಮ ಯೆಹೋವ ದೇವರಿಗೆ ಪರಿಶುದ್ಧವಾಗಿದೆ. ನೀವು ವ್ಯಥೆಪಡಬೇಡಿರಿ. ಯೆಹೋವ ದೇವರ ಆನಂದವೇ ನಿಮ್ಮ ಬಲ," ಎಂದು ಹೇಳಿದನು.
11 ಲೇವಿಯರು ಕೂಡ, "ಈ ದಿನವು ಪರಿಶುದ್ಧವಾದುದರಿಂದ ನೀವು ಶಾಂತವಾಗಿದ್ದು, ವ್ಯಥೆಪಡಬೇಡಿರಿ," ಎಂದು ಹೇಳಿ ಜನರನ್ನು ಸುಮ್ಮನಿರಿಸಿದರು.
12 ಆಗ ಜನರೆಲ್ಲರೂ ತಮಗೆ ತಿಳಿಸಿದ ಮಾತುಗಳನ್ನು ಗ್ರಹಿಸಿದ್ದರಿಂದ, ಅವರು ಅನ್ನಪಾನಗಳನ್ನು ತೆಗೆದುಕೊಂಡು, ಏನೂ ಇಲ್ಲದವರಿಗೆ ಆಹಾರ ಪಾಲುಗಳನ್ನು ಕಳುಹಿಸಲೂ ಮತ್ತು ಸಂತೋಷದಿಂದ ಆಚರಿಸಲೂ ಹೊರಟು ಹೋದರು.