22 ತಾವು ಜ್ಞಾನಿಗಳೆಂದು ಹೇಳಿಕೊಂಡರೂ ಮೂಢರಾಗಿದ್ದಾರೆ. 23 ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಶು, ಪಕ್ಷಿ, ಸರ್ಪಾದಿಗಳ ಮೂರ್ತಿಗಳೊಂದಿಗೆ ಬದಲಿಸಿಕೊಂಡರು.
24 ಆದಕಾರಣ ಅವರು ತಮ್ಮ ಹೃದಯದ ದುರಾಶೆಗಳಂತೆ ನಡೆದು ತಮ್ಮ ದೇಹಗಳನ್ನು ಮಲಿನ ಮಾಡಿಕೊಳ್ಳಲಿ ಎಂದು ದೇವರು ಅವರನ್ನು ಅಶುದ್ಧತೆಗೆ ಒಪ್ಪಿಸಿಬಿಟ್ಟರು. 25 ಅವರು ದೇವರ ಸತ್ಯವನ್ನು ಸುಳ್ಳನ್ನಾಗಿ ಬದಲಿಸಿಕೊಂಡು, ಸೃಷ್ಟಿಕರ್ತನನ್ನು ಆರಾಧಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವೆ ಸಲ್ಲಿಸುವವರಾದರು. ಸೃಷ್ಟಿ ಕರ್ತನೇ ನಿರಂತರವಾಗಿ ಸ್ತುತಿ ಹೊಂದತಕ್ಕವರು. ಆಮೆನ್.
26 ಅವರು ಇಂಥದ್ದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ಲಜ್ಜಾಸ್ಪದವಾದ ಕಾಮಾಭಿಲಾಷೆಗೆ ಒಪ್ಪಿಸಿಬಿಟ್ಟರು. ಹೇಗೆಂದರೆ ಅವರ ಸ್ತ್ರೀಯರು ಸಹ ಸ್ವಾಭಾವಿಕವಾದ ಭೋಗವನ್ನು ಬಿಟ್ಟು, ಅಸ್ವಾಭಾವಿಕವಾದದ್ದನ್ನು ಅನುಸರಿಸಿದರು. 27 ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರೊಂದಿಗೊಬ್ಬರು ಕಾಮಾತುರದಿಂದ ತಾಪಗೊಂಡರು. ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣ ಕೃತ್ಯಗಳನ್ನು ನಡೆಸಿ ತಮ್ಮ ತಪ್ಪಿಗೆ ತಕ್ಕ ದಂಡನೆಯನ್ನು ಹೊಂದುವವರಾದರು.