8 ನಾನು ನಿಮಗೆ ಹೇಳುವುದೇನೆಂದರೆ, ದೇವರು ನಂಬಿಗಸ್ತರು ಎಂದು ತೋರಿಸುವುದಕ್ಕಾಗಿ ಕ್ರಿಸ್ತ ಯೇಸು ಯೆಹೂದ್ಯರಿಗೆ ಸೇವಕರಾಗಿ ಬಂದರು. ಹೀಗೆ ದೇವರು ಪಿತೃಗಳಿಗೆ ಕೊಟ್ಟ ವಾಗ್ದಾನಗಳನ್ನು ದೃಢಪಡಿಸಿದರು. 9 ಇದಲ್ಲದೆ ಯೆಹೂದ್ಯರಲ್ಲದವರು ದೇವರ ಕರುಣೆಗಾಗಿ ದೇವರನ್ನು ಮಹಿಮೆ ಪಡಿಸುವಂತೆ ಹೀಗೆ ಮಾಡಿದರು. ಇದು ಪವಿತ್ರ ವೇದದಲ್ಲಿ ಹೀಗೆ ಬರೆದದ್ದನ್ನು ನೆರವೇರಿಸಿತು:
"ಆದ್ದರಿಂದ ಯೆಹೂದ್ಯರಲ್ಲದವರ ನಡುವೆ ನಾನು ನಿನ್ನನ್ನು ಸ್ತುತಿಸುವೆನು,
ನಾನು ನಿನ್ನ ನಾಮವನ್ನು ಸ್ತುತಿಸಿ ಹಾಡುವೆನು."15:9 2 ಸಮು 22:50; ಕೀರ್ತನೆ 18:49
10 ಮತ್ತೊಂದು ಕಡೆಯಲ್ಲಿ ಹೀಗೆ ಬರೆಯಲಾಗಿದೆ:
"ಯೆಹೂದ್ಯರಲ್ಲದವರೇ ದೇವಜನರೊಂದಿಗೆ ಸೇರಿ ಸಂತೋಷಪಡಿರಿ."15:10 ಧರ್ಮೋ 32:43
11 ಇನ್ನೊಂದು ಕಡೆಯಲ್ಲಿ,
"ಯೆಹೂದ್ಯರಲ್ಲದವರೇ ಕರ್ತನನ್ನು ಸ್ತುತಿಸಿರಿ.
ಸಮಸ್ತ ಜನರೇ ಕರ್ತನಿಗೆ ಸ್ತೋತ್ರಮಾಡಿರಿ."15:11 ಕೀರ್ತನೆ 117:1
12 ಪುನಃ ಪ್ರವಾದಿ ಯೆಶಾಯನು ಹೇಳುವುದೇನೆಂದರೆ:
"ಇಷಯನ ವಂಶದಿಂದ ಬೇರು ಒಂದು ಚಿಗುರುವುದು,
ಜನಾಂಗಗಳನ್ನು ಆಳುವವರಾಗಿ ಅವರು ಉದಯಿಸುವರು.
ಯೆಹೂದ್ಯರಲ್ಲದವರು ಆತನಲ್ಲಿ ನಿರೀಕ್ಷೆ ಇಡುವರು."15:12 ಯೆಶಾಯ 11:10
13 ನಿರೀಕ್ಷೆಯ ದೇವರು, ನೀವು ಪವಿತ್ರಾತ್ಮನ ಶಕ್ತಿಯಿಂದ ನಿಮ್ಮ ನಿರೀಕ್ಷೆಯನ್ನು ಹೆಚ್ಚಿಸಿ, ನೀವು ನಿಮ್ಮ ವಿಶ್ವಾಸದಿಂದ ಸಕಲ ಸಂತೋಷದಿಂದಲೂ ಸಮಾಧಾನದಿಂದಲೂ ಪ್ರವಾಹಿಸುವಂತೆ ಮಾಡಲಿ.