11 ಯೇಸುವನ್ನು ಮರಣದಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮವು ನಿಮ್ಮಲ್ಲಿ ವಾಸಮಾಡುತ್ತಿರುವುದಾದರೆ, ಕ್ರಿಸ್ತ ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ವಾಸಿಸುವ ಪವಿತ್ರಾತ್ಮ ದೇವರ ಮೂಲಕವೇ ನಿಮ್ಮ ಸಾಯುತ್ತಿರುವ ದೇಹಗಳಿಗೂ ಜೀವವನ್ನು ಕೊಡುವರು.
12 ಆದ್ದರಿಂದ, ಪ್ರಿಯರೇ, ನಾವು ಮಾಂಸಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬದುಕಲು ಋಣಸ್ಥರಲ್ಲ. 13 ಏಕೆಂದರೆ, ನೀವು ಮಾಂಸಭಾವಕ್ಕೆ ಅನುಸಾರವಾಗಿ ಜೀವಿಸಿದರೆ, ಸಾಯುವಿರಿ. ಆದರೆ ಪವಿತ್ರಾತ್ಮ ದೇವರಿಂದ ದೈಹಿಕ ದುರಭ್ಯಾಸಗಳನ್ನು ಸಾಯಿಸಿದರೆ, ನೀವು ಬದುಕುವಿರಿ.
14 ಯಾರು ದೇವರ ಆತ್ಮರಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಪುತ್ರರಾಗಿರುತ್ತಾರೆ. 15 ನಿಮ್ಮನ್ನು ಪುನಃ ಭಯಕ್ಕೆ ದಾಸರನ್ನಾಗಿ ಮಾಡುವ ಆತ್ಮನನ್ನು ನಾವು ಹೊಂದದೆ, ಪುತ್ರತ್ವದ ಪವಿತ್ರಾತ್ಮನನ್ನೇ ಹೊಂದಿದವರಾಗಿ ದೇವರನ್ನು, "ಅಪ್ಪಾ, ತಂದೆಯೇ," ಎಂದು ಕರೆಯುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರ ಆತ್ಮರು ನಮ್ಮ ಆತ್ಮದೊಂದಿಗೆ ಸಾಕ್ಷಿಕೊಡುತ್ತಾರೆ. 17 ನಾವು ಈಗ ಮಕ್ಕಳಾಗಿರುವುದಾದರೆ, ಬಾಧ್ಯರಾಗಿರುತ್ತೇವೆ; ದೇವರಿಗೆ ಬಾಧ್ಯರು ಮತ್ತು ಕ್ರಿಸ್ತ ಯೇಸುವಿನೊಂದಿಗೆ ಸಹಬಾಧ್ಯರಾಗಿದ್ದೇವೆ. ನಾವು ಕ್ರಿಸ್ತ ಯೇಸುವಿನ ಶ್ರಮೆಗಳಲ್ಲಿ ನಿಜವಾಗಿಯೂ ಪಾಲುಗಾರರಾಗಿದ್ದರೆ, ಅವರ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.