11 ಅದಕ್ಕೆ ನೊವೊಮಿಯು, "ಬೇಡ ನನ್ನ ಮಕ್ಕಳೇ, ನೀವು ಹಿಂತಿರುಗಿ ಹೋಗಿರಿ. ನನ್ನ ಸಂಗಡ ಏಕೆ ಬರುತ್ತೀರಿ? ನಿಮಗೆ ಗಂಡಂದಿರಾಗುವ ಹಾಗೆ ಇನ್ನು ಮುಂದೆ ನನ್ನ ಗರ್ಭದಲ್ಲಿ ನನಗೆ ಪುತ್ರರಾಗುವರೋ? 12 ನನ್ನ ಮಕ್ಕಳೇ, ನೀವು ನಿಮ್ಮ ಮನೆಗೆ ಹಿಂದಿರುಗಿ ಹೋಗಿರಿ. ಏಕೆಂದರೆ ನಾನು ಪುನಃ ಮದುವೆಮಾಡಿಕೊಳ್ಳುವ ಪ್ರಾಯ ನನಗೆ ದಾಟಿಹೋಗಿದೆ. ಒಂದು ವೇಳೆ, ನಾನು ಸಂತಾನವಾಗುವ ನಿರೀಕ್ಷೆಯಿಂದ ಈ ಹೊತ್ತೇ ಮದುವೆಯಾಗಿ ಮಕ್ಕಳನ್ನು ಹೆತ್ತರೂ, 13 ಅವರು ದೊಡ್ಡವರಾಗುವವರೆಗೂ ಕಾದು ಕೊಳ್ಳುವಿರೋ? ಗಂಡನಿಲ್ಲದೆ ನೀವು ತಾಳಿಕೊಂಡಿರುವಿರೋ? ಇಲ್ಲ, ನನ್ನ ಮಕ್ಕಳೇ; ಯೆಹೋವ ದೇವರ ಹಸ್ತವು ನನಗೆ ವಿರೋಧವಾಗಿದೆ. ಆದ್ದರಿಂದ ನಿಮಗಿಂತ ನನಗೆ ಬಹು ದುಃಖವಾಗಿದೆ," ಎಂದಳು.