Pular para o conteúdo
Publicidade

ರೂತಳು 1

ನೊವೊಮಿ ತನ್ನ ಗಂಡ ಮತ್ತು ಮಕ್ಕಳನ್ನು ಕಳೆದುಕೊಂಡದ್ದು

1 ನ್ಯಾಯಸ್ಥಾಪಕರು ಆಳುತ್ತಿದ್ದ ಆ ದಿನಗಳಲ್ಲಿ ಇಸ್ರಾಯೇಲ್ ದೇಶದೊಳಗೆ ಬರ ಉಂಟಾಗಿದ್ದಾಗ, ಯೆಹೂದದ ಬೇತ್ಲೆಹೇಮಿನವನಾದ ಒಬ್ಬ ಮನುಷ್ಯನು ತನ್ನ ಹೆಂಡತಿ ಮತ್ತು ತನ್ನ ಇಬ್ಬರು ಪುತ್ರರೊಂದಿಗೆ ಮೋವಾಬ್ ದೇಶದಲ್ಲಿ ಸ್ವಲ್ಪ ಕಾಲ ವಾಸಮಾಡಬೇಕೆಂದು ಹೋದನು. 2 ಆ ಮನುಷ್ಯನ ಹೆಸರು ಎಲೀಮೆಲೆಕನು. ಅವನ ಹೆಂಡತಿಯ ಹೆಸರು ನೊವೊಮಿ. ಅವನ ಪುತ್ರರಲ್ಲಿ ಒಬ್ಬನ ಹೆಸರು ಮಹ್ಲೋನನು, ಮತ್ತೊಬ್ಬನ ಹೆಸರು ಕಿಲ್ಯೋನನು. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಬಂದು ಮೋವಾಬ್ ದೇಶದಲ್ಲಿ ವಾಸವಾಗಿದ್ದರು.

3 ಆದರೆ ನೊವೊಮಿಯ ಗಂಡನಾದ ಎಲೀಮೆಲೆಕನು ಸತ್ತುಹೋದನು. ಆಕೆಯೂ ಆಕೆಯ ಇಬ್ಬರು ಪುತ್ರರೂ ಉಳಿದರು. 4 ಇವರು ಒರ್ಫಾ, ರೂತ್ ಎಂಬ ಹೆಸರುಗಳುಳ್ಳ ಇಬ್ಬರು ಮೋವಾಬ್ ದೇಶದ ಸ್ತ್ರೀಯರನ್ನು ಮದುವೆಮಾಡಿಕೊಂಡು ಸುಮಾರು ಹತ್ತು ವರುಷ ಅಲ್ಲಿ ವಾಸವಾಗಿದ್ದರು. 5 ಅಲ್ಲಿಯೇ ಮಹ್ಲೋನ ಮತ್ತು ಕಿಲ್ಯೋನ ಇಬ್ಬರೂ ಸತ್ತುಹೋದರು. ಆ ಸ್ತ್ರೀಯು ತನ್ನ ಇಬ್ಬರು ಪುತ್ರರನ್ನೂ ತನ್ನ ಗಂಡನನ್ನೂ ಕಳೆದುಕೊಂಡು ಒಬ್ಬಳೇ ಉಳಿದಳು.

ಬೇತ್ಲೆಹೇಮಿಗೆ ನೊವೊಮಿ ಮತ್ತು ರೂತಳ ಪುನರಾಗಮನ

6 ಯೆಹೋವ ದೇವರು ತಮ್ಮ ಜನರಿಗೆ ರೊಟ್ಟಿಯನ್ನು ಕೊಡುವ ಹಾಗೆ ಅವರನ್ನು ದರ್ಶಿಸಿದರೆಂದು ಅವಳು ಮೋವಾಬ್ ದೇಶದಲ್ಲಿ ಕೇಳಿದ್ದರಿಂದ ಅವಳು ತನ್ನ ಸೊಸೆಯರ ಸಂಗಡ ಮೋವಾಬ್ ದೇಶದಿಂದ ಸ್ವದೇಶಕ್ಕೆ ಹೋಗಬೇಕೆಂದು ನಿರ್ಧರಿಸಿದಳು. 7 ಆಕೆಯು ಇಬ್ಬರು ಸೊಸೆಯರೊಡನೆ ತಾನಿದ್ದ ಸ್ಥಳದಿಂದ ಯೆಹೂದ ದೇಶಕ್ಕೆ ಹೋಗಬೇಕೆಂದು ಹೊರಟಳು.

8 ನೊವೊಮಿಯು ತನ್ನ ಇಬ್ಬರು ಸೊಸೆಯರಿಗೆ, "ನೀವು ನಿಮ್ಮ ನಿಮ್ಮ ತಾಯಿಯ ಮನೆಗೆ ತಿರುಗಿ ಹೋಗಿರಿ. ನೀವು ಮರಣ ಹೊಂದಿದ ಪತಿಯರಿಗೂ ನನಗೂ ದಯೆ ತೋರಿಸಿದ ಹಾಗೆಯೇ ಯೆಹೋವ ದೇವರು ನಿಮಗೆ ದಯೆ ತೋರಲಿ. 9 ನೀವು ಮದುವೆಯಾಗಿ ನಿಮ್ಮ ಗಂಡನ ಮನೆಯಲ್ಲಿ ವಿಶ್ರಾಂತಿ ಹೊಂದುವಂತೆ, ಯೆಹೋವ ದೇವರು ಆಶೀರ್ವದಿಸಲಿ," ಎಂದು ಹೇಳಿದಳು.

ನಂತರ ನೊವೊಮಿಯು ಅವರಿಗೆ ಮುದ್ದಿಟ್ಟಳು. 10 ಆಗ ಅವರು ಗಟ್ಟಿಯಾಗಿ ಅತ್ತು ಆಕೆಗೆ, "ನಿಶ್ಚಯವಾಗಿ ನಿಮ್ಮ ಜನರ ಬಳಿಗೆ ನಿಮ್ಮ ಸಂಗಡ ತಿರುಗಿ ಬರುತ್ತೇವೆ," ಎಂದರು.

11 ಅದಕ್ಕೆ ನೊವೊಮಿಯು, "ಬೇಡ ನನ್ನ ಮಕ್ಕಳೇ, ನೀವು ಹಿಂತಿರುಗಿ ಹೋಗಿರಿ. ನನ್ನ ಸಂಗಡ ಏಕೆ ಬರುತ್ತೀರಿ? ನಿಮಗೆ ಗಂಡಂದಿರಾಗುವ ಹಾಗೆ ಇನ್ನು ಮುಂದೆ ನನ್ನ ಗರ್ಭದಲ್ಲಿ ನನಗೆ ಪುತ್ರರಾಗುವರೋ? 12 ನನ್ನ ಮಕ್ಕಳೇ, ನೀವು ನಿಮ್ಮ ಮನೆಗೆ ಹಿಂದಿರುಗಿ ಹೋಗಿರಿ. ಏಕೆಂದರೆ ನಾನು ಪುನಃ ಮದುವೆಮಾಡಿಕೊಳ್ಳುವ ಪ್ರಾಯ ನನಗೆ ದಾಟಿಹೋಗಿದೆ. ಒಂದು ವೇಳೆ, ನಾನು ಸಂತಾನವಾಗುವ ನಿರೀಕ್ಷೆಯಿಂದ ಈ ಹೊತ್ತೇ ಮದುವೆಯಾಗಿ ಮಕ್ಕಳನ್ನು ಹೆತ್ತರೂ, 13 ಅವರು ದೊಡ್ಡವರಾಗುವವರೆಗೂ ಕಾದು ಕೊಳ್ಳುವಿರೋ? ಗಂಡನಿಲ್ಲದೆ ನೀವು ತಾಳಿಕೊಂಡಿರುವಿರೋ? ಇಲ್ಲ, ನನ್ನ ಮಕ್ಕಳೇ; ಯೆಹೋವ ದೇವರ ಹಸ್ತವು ನನಗೆ ವಿರೋಧವಾಗಿದೆ. ಆದ್ದರಿಂದ ನಿಮಗಿಂತ ನನಗೆ ಬಹು ದುಃಖವಾಗಿದೆ," ಎಂದಳು.

14 ಆಗ ಅವರು ತಿರುಗಿ ಗಟ್ಟಿಯಾದ ಸ್ವರದಿಂದ ಅತ್ತರು. ಒರ್ಫಾ ತನ್ನ ಅತ್ತೆಯನ್ನು ಮುದ್ದಿಟ್ಟು ಹೊರಟು ಹೋದಳು; ಆದರೆ ರೂತಳು ಅತ್ತೆಯನ್ನು ಅಂಟಿಕೊಂಡಳು.

15 ಆಗ ನೊವೊಮಿ, "ಇಗೋ, ನಿನ್ನ ಓರಗಿತ್ತಿಯು ತನ್ನ ಜನರ ಬಳಿಗೂ ತನ್ನ ದೇವರುಗಳ ಬಳಿಗೂ ತಿರುಗಿ ಹೋದಳು. ನೀನೂ ನಿನ್ನ ಓರಗಿತ್ತಿಯ ಹಿಂದೆ ಹೋಗು," ಎಂದಳು.

16 ಅದಕ್ಕೆ ರೂತಳು, "ನಿಮ್ಮನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡಿರಿ. ಏಕೆಂದರೆ ನೀವು ಎಲ್ಲಿ ಹೋಗುವಿರೋ ನಾನು ಅಲ್ಲಿಗೇ ಬರುವೆನು. ನೀವು ಎಲ್ಲಿ ಇಳುಕೊಳ್ಳುವಿರೋ ನಾನು ಅಲ್ಲಿ ಇಳುಕೊಳ್ಳುವೆನು. ನಿಮ್ಮ ಜನರೇ ನನ್ನ ಜನರು; ನಿಮ್ಮ ದೇವರೇ ನನ್ನ ದೇವರು. 17 ನೀವು ಎಲ್ಲಿ ಸಾಯುತ್ತೀರೋ ಅಲ್ಲಿಯೇ ನಾನು ಸಾಯುವೆನು. ಅಲ್ಲಿಯೇ ನನಗೆ ಸಮಾಧಿಯಾಗಲಿ. ಮರಣದಿಂದಲ್ಲದೆ ನಾನು ನಿಮ್ಮನ್ನು ಅಗಲಿದರೆ ಯೆಹೋವ ದೇವರು ನನಗೆ ಬೇಕಾದದ್ದನ್ನು ಮಾಡಲಿ," ಎಂದಳು. 18 ರೂತಳು ತನ್ನ ಸಂಗಡ ಬರಲು ದೃಢವಾದ ಮನಸ್ಸು ಮಾಡಿಕೊಂಡಿದ್ದಾಳೆಂದು ನೊವೊಮಿ ತಿಳಿದು ಸುಮ್ಮನಾದಳು.

19 ಹಾಗೆಯೇ ಇಬ್ಬರೂ ಬೇತ್ಲೆಹೇಮಿನವರೆಗೂ ನಡೆದುಹೋದರು. ಅವರು ಬೇತ್ಲೆಹೇಮಿನಲ್ಲಿ ಪ್ರವೇಶಿಸುವಾಗ ಆ ಪಟ್ಟಣದವರಲ್ಲಿ ಕುತೂಹಲ ಮೂಡಿಸಿತು. ಅವರು, "ಇವಳು ನೊವೊಮಿಯೋ?" ಎಂದರು.

20 ಆಗ ಆಕೆಯು ಅವರಿಗೆ, "ನನ್ನನ್ನು ‘ನೊವೊಮಿ’1:20 ನೊವೊಮಿ ಎಂದರೆ ರಮಣೀಯ ಎಂದು ಕರೆಯಬೇಡಿರಿ. ಮಾರಾ1:20 ಮಾರಾ ಎಂದರೆ ಕಹಿ ಎಂದು ಕರೆಯಿರಿ ಏಕೆಂದರೆ ಸರ್ವಶಕ್ತರು ನನ್ನನ್ನು ಬಹು ದುಃಖದಿಂದ ನಡೆಸಿದರು. 21 ನಾನು ಪರಿಪೂರ್ಣಳಾಗಿ ಹೊರಟುಹೋದೆನು. ಯೆಹೋವ ದೇವರು ನನ್ನನ್ನು ಏನೂ ಇಲ್ಲದೆ ಬರಮಾಡಿದ್ದಾರೆ. ಯೆಹೋವ ದೇವರು ನನಗೆ ವಿರೋಧವಾಗಿ ಸಾಕ್ಷಿಕೊಟ್ಟು, ಸರ್ವಶಕ್ತರಾದ ದೇವರು ನನಗೆ ವಿರೋಧವಾಗಿ ನನ್ನನ್ನು ಬಾಧಿಸಿರುವುದರಿಂದ ನೀವು ನನ್ನನ್ನು ನೊವೊಮಿ ಎಂದು ಕರೆಯುವುದು ಸರಿಯೇ?" ಎಂದಳು.

22 ಹೀಗೆ ನೊವೊಮಿ ಮೋವಾಬ್ ದೇಶಸ್ಥಳಾದ ರೂತಳೆಂಬ ತನ್ನ ಸೊಸೆಯ ಸಂಗಡ ಮೋವಾಬ್ ದೇಶದಿಂದ ತಿರುಗಿಬಂದಳು. ಅವರು ಜವೆಗೋಧಿಯ ಸುಗ್ಗಿಯ ಕಾಲ ಪ್ರಾರಂಭವಾದಾಗ ಬೇತ್ಲೆಹೇಮಿಗೆ ತಲುಪಿದರು.

Estes versículos te tocaram? Ore agora!

+581 estão orando agora.

Junte-se à corrente de oração.

Rute
Ver todos os capítulos de Rute