Publicidade

Cânticos 8

ನಲ್ಲೆ

1 ನೀನು ನನ್ನ ತಾಯಿಯ ಹಾಲನ್ನು ಕುಡಿದ ನನ್ನ ಅಣ್ಣನ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು!

ನಾನು ನಿನ್ನನ್ನು ಹೊರಗೆ ಕಂಡೊಡನೆ ಮುದ್ದಿಟ್ಟರೂ ಯಾರೂ ಹೀನೈಸುತ್ತಿರಲಿಲ್ಲ.

2 ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು,

ಅಲ್ಲಿ ಆಕೆಯು ನಿನಗೆ ಉಪದೇಶ ಮಾಡಬಹುದಾಗಿತ್ತು;

ದ್ರಾಕ್ಷಿಯ ಮಿಶ್ರಪಾನವನ್ನು ಕೊಡುತ್ತಿದ್ದೆ,

ನನ್ನ ದಾಳಿಂಬೆಯ ಸವಿರಸವನ್ನು ನಿನಗೆ ಕುಡಿಸುತ್ತಿದ್ದೆನು.

3 ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು.

4 ಯೆರೂಸಲೇಮಿನ ಮಹಿಳೆಯರೇ,

ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ,

ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು

ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.

ಸ್ತ್ರೀಯರು

5 ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು?

ಎಬ್ಬಿಸಿದೆನಲ್ಲಾ ನಿನ್ನನ್ನು ಆ ಸೇಬಿನ ಮರದಡಿಯಲ್ಲಿ

ಇಗೋ, ಅಲ್ಲಿ ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ್ದು, ಅಲ್ಲೇ ನಿನ್ನನ್ನು ಪ್ರಸವವೇದನೆಯಿಂದ ಹೆತ್ತಳು.

6 ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ.

ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ,

ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ,

ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ.

7 ನಂದಿಸಲಾರವು ಪ್ರೀತಿಯನ್ನು ಜಲರಾಶಿಗಳು,

ಮುಣುಗಿಸಲಾರವು ಅದನ್ನು ಪ್ರವಾಹಗಳು.

ಪ್ರೀತಿಯನ್ನು ಗಳಿಸಲು ಮನೆಮಾರುಗಳನ್ನು ಮಾರಿದರೂ ಸಿಗುವುದು ಅವನಿಗೆ ತಿರಸ್ಕಾರ.

ಆರನೆಯ ಗೀತೆ - ಸೋದರರು

8 ಸ್ತನಬಾರದ ತಂಗಿಯು ನಮಗುಂಟು;

ಅವಳನ್ನು ವರಿಸಲು ಯಾರಾದರು ಬಂದರೆ ಅವಳ ಹಿತಕ್ಕೆ ಏನು ಮಾಡೋಣ?

9 ಅವಳು ಕೋಟೆಯಾದರೆ ಅದರ ಮೇಲೆ ಬೆಳ್ಳಿಯ ಬುರುಜನ್ನು ಕಟ್ಟುವೆವು,

ಬಾಗಿಲಾದರೆ ದೇವದಾರು ಹಲಗೆಗಳಿಂದ ಭದ್ರಪಡಿಸುವೆವು.

ನಲ್ಲೆ

10 ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು,

ಹೀಗಿದ್ದು ಅವನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತ್ತು.

11 ಸೊಲೊಮೋನನು ಬಾಲ್ಹಾಮೋನಿನಲ್ಲಿ ಇದ್ದ ತನ್ನ ದ್ರಾಕ್ಷಿ ತೋಟವನ್ನು ಗುತ್ತಿಗೆಗೆ ಕೊಟ್ಟನು,

ಪ್ರತಿಯೊಬ್ಬ ಗುತ್ತಿಗೆದಾರ ತೆರಬೇಕಾಗಿತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು.

12 ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯ ನಿನಗಿರಲಿ,

ಅದರ ಮೇಲ್ವಿಚಾರಕರಿಗೆ ಇನ್ನೂರು ನಾಣ್ಯ ಸೇರಲಿ;

ನನ್ನದೇ ಆಗಿರುವ ನನ್ನ ತೋಟವು ನನ್ನ ವಶದಲ್ಲಿಯೇ ಇದೆ.

ನಲ್ಲ

13 ಉದ್ಯಾನದಲ್ಲಿ ವಾಸಿಸುವವಳೇ

ಗೆಳೆಯರು ನಿನ್ನ ಧ್ವನಿ ಕೇಳಬೇಕೆಂದಿದ್ದಾರೆ,

ನನಗೂ ಆ ಧ್ವನಿ ಕೇಳಿಸಲಿ.

ನಲ್ಲೆ

14 ಸುಗಂಧಸಸ್ಯದ ಪರ್ವತಗಳಲ್ಲಿ ಜಿಂಕೆಯಂತೆಯೂ,

ಪ್ರಾಯದ ಹರಿಣದಂತೆಯೂ ತ್ವರೆಮಾಡಿ ಬಾ ನನ್ನಿನಿಯನೇ.

Veja também

Publicidade
Cânticos
Ver todos os capítulos de Cânticos
Bíblia Online Bíblia Online

Bíblia Online • Versão: 2026-06-15_21-32-39-