ಮೋಶೆಯ ಪ್ರಾರ್ಥನೆ
12 ಮೋಶೆಯು ಯೆಹೋವನಿಗೆ ಹೇಳಿದ್ದೇನೆಂದರೆ, "‘ಈ ಜನರನ್ನು ಆ ಸೀಮೆಗೆ ನಡೆಸಿಕೊಂಡು ಹೋಗಬೇಕೆಂದು’ ನೀನು ನನಗೆ ಆಜ್ಞಾಪಿಸಿದಿಯಷ್ಟೇ. ನನ್ನ ಸಂಗಡ ಯಾರನ್ನು ಕಳುಹಿಸಿ ಕೊಡುವೆಯೆಂಬುದನ್ನು ನನಗೆ ತಿಳಿಸಲಿಲ್ಲವಲ್ಲಾ. ‘ಆದರೆ ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು. ನಿನಗೆ ನನ್ನ ದಯೆ ದೊರಕಿತೆಂದೂ’ ನೀನು ನನಗೆ ಹೇಳಿರುವೆಯಲ್ಲಾ. 13 ನನ್ನ ಮೇಲೆ ದಯೆಯಿರುವುದಾದರೆ ನಿನ್ನ ಮಾರ್ಗವನ್ನು ನನಗೆ ತೋರಿಸು ನಾನು ನಿನ್ನನ್ನು ಅರಿತುಕೊಳ್ಳುವಂತೆ ನಿನ್ನ ಕೃಪೆಯನ್ನು ನನಗೆ ದಯಪಾಲಿಸು ಆಗ ನಿನ್ನ ದಯೆ ನನಗೆ ದೊರೆಯಿತೆಂದು ನನಗೆ ತಿಳಿಯುವುದು. ಈ ಜನಾಂಗವು ನಿನ್ನ ಪ್ರಜೆಯೆಂಬುದನ್ನು ನೆನಪುಮಾಡಿಕೋ" ಎಂದು ಅರಿಕೆಮಾಡಿದನು.
14 ಅದಕ್ಕೆ ಯೆಹೋವನು, "ನನ್ನ ಪ್ರಸನ್ನತೆಯು ನಿನ್ನ ಜೊತೆಯಲ್ಲಿ ಬರುವುದು, ನಾನು ನಿಮಗೆ ವಿಶ್ರಾಂತಿಯನ್ನು ನೀಡುವೆನು" ಅಂದನು. 15 ಮೋಶೆಯು ಆತನಿಗೆ, "ನಿನ್ನ ಪ್ರಸನ್ನತೆಯು ನಮ್ಮ ಸಂಗಡ ಬಾರದೇ ಹೋದರೆ ನಮ್ಮನ್ನು ಇಲ್ಲಿಂದ ಹೋಗಗೊಡಿಸಬೇಡ. 16 ನನಗೂ ನಿನ್ನ ಪ್ರಜೆಗಳಾದ ಇವರಿಗೂ ನಿನ್ನ ದಯೆಯು ದೊರಕಿತೆಂಬುದು ನೀನು ನಮ್ಮ ಸಂಗಡ ಬರುವುದರಿಂದಲೇ ಹೊರತು ಬೇರೆ ಯಾವುದರಿಂದ ತಿಳಿದುಬರುವುದು? ಇದರಿಂದ ನಾನೂ ಮತ್ತು ನಿನ್ನ ಪ್ರಜೆಗಳಾದ ಇವರೂ ಭೂಮಿಯಲ್ಲಿರುವ ಬೇರೆ ಎಲ್ಲಾ ಜನಗಳಿಗಿಂತಲೂ ವಿಶೇಷತೆಯುಳ್ಳವರೆಂಬುದು ಗೊತ್ತಾಗುವುದು" ಅಂದನು.
17 ಯೆಹೋವನು ಮೋಶೆಗೆ, "ನಿನಗೆ ನನ್ನ ದಯೆಯು ದೊರಕಿರುವುದರಿಂದಲೂ, ನಾನು ನಿನ್ನ ಹೆಸರನ್ನು ಬಲ್ಲವನಾಗಿರುವುದರಿಂದಲೂ ನಿನಗೋಸ್ಕರ ಈ ಕಾರ್ಯವನ್ನು ಮಾಡುವೆನು" ಎಂದು ಹೇಳಿದನು.