ಮೋಶೆ ಮತ್ತು ಯೆಹೋವ ದೇವರ ಮಹಿಮೆ
12 ಮೋಶೆಯು ಯೆಹೋವ ದೇವರಿಗೆ, " ‘ಈ ಜನರನ್ನು ನಡೆಸಿಕೊಂಡು ಹೋಗು,’ ಎಂದು ನನಗೆ ಹೇಳುತ್ತಿರುವಿರಿ. ಯಾರನ್ನು ನನ್ನ ಸಂಗಡ ಕಳುಹಿಸುವಿರಿ, ಎಂದು ನೀವು ನನಗೆ ತಿಳಿಸಲಿಲ್ಲ. ಆದರೂ ನೀವು ನನಗೆ, ‘ನಾನು ನಿನ್ನನ್ನು ನಿನ್ನ ಹೆಸರಿನ ಮೂಲಕ ತಿಳಿದಿದ್ದೇನೆ, ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರೆಯಿತು,’ ಎಂದೂ ಹೇಳಿದ್ದೀರಲ್ಲಾ. 13 ಹಾಗಾದರೆ ಈಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆಕಿದ್ದೇ ಆದರೆ ನಾನು ನಿಮ್ಮನ್ನು ತಿಳಿಯುವ ಹಾಗೆ, ನಿಮ್ಮ ಮಾರ್ಗವನ್ನು ನನಗೆ ತೋರಿಸಿ. ಆಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಿರುವುದು. ಈ ಜನಾಂಗವು ನಿಮ್ಮ ಜನರೇ, ಎಂದು ಜ್ಞಾಪಿಸಿಕೊಳ್ಳುವೆನು," ಎಂದು ಹೇಳಿದನು.
14 ಆಗ ಯೆಹೋವ ದೇವರು, "ನನ್ನ ಪ್ರಸನ್ನತೆಯು ನಿನ್ನ ಸಂಗಡ ಹೋಗುವುದು. ನಾನು ನಿನಗೆ ವಿಶ್ರಾಂತಿಯನ್ನು ಕೊಡುವೆನು," ಎಂದರು.
15 ಮೋಶೆಯು ಅವರಿಗೆ, "ನಿಮ್ಮ ಪ್ರಸನ್ನತೆಯು ನಮ್ಮೊಂದಿಗೆ ಹೋಗದಿದ್ದರೆ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಬೇಡಿ. 16 ಏಕೆಂದರೆ ನನಗೂ ನಿಮ್ಮ ಜನರಿಗೂ ನಿಮ್ಮ ದೃಷ್ಟಿಯಲ್ಲಿ ದಯೆ ದೊರಕಿತೆಂದು ಯಾವುದರಿಂದ ತಿಳಿದುಬರುವುದು? ನೀವು ನನ್ನೊಂದಿಗೆ ಹೋಗುವುದರಿಂದಲ್ಲವೋ? ಹೀಗೆ ನಾನೂ ನಿಮ್ಮ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕವಾಗಿರುವೆವು," ಎಂದನು.
17 ಅದಕ್ಕೆ ಯೆಹೋವ ದೇವರು ಮೋಶೆಗೆ, "ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ಏಕೆಂದರೆ ನನ್ನ ದೃಷ್ಟಿಯಲ್ಲಿ ನಿನಗೆ ದಯೆ ದೊರಕಿತು. ನಾನು ನಿನ್ನನ್ನು ನಿನ್ನ ಹೆಸರಿನಿಂದ ತಿಳಿದಿದ್ದೇನೆ," ಎಂದರು.