8 ಹೀಗಿರಲು ಅಬ್ರಾಮನು ಲೋಟನಿಗೆ, "ನನಗೂ ನಿನಗೂ, ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಾಗಬಾರದು; ನಾವು ಸಹೋದರರಲ್ಲವೇ. 9 ದೇಶವೆಲ್ಲಾ ನಿನ್ನ ಎದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕವಾಗಿ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು" ಎಂದು ಹೇಳಿದನು.
10 ಲೋಟನು ಕಣ್ಣೆತ್ತಿ ನೋಡಲಾಗಿ, ಯೊರ್ದನ್ ಹೊಳೆಯ ಸುತ್ತಲಿನ ಪ್ರದೇಶವು ಚೋಗರಿನವರೆಗೆ ನೀರಾವರಿಯ ಪ್ರದೇಶವೆಂದು ತಿಳಿದುಕೊಂಡನು. ಯೆಹೋವನು ಸೊದೋಮ್ ಗೊಮೋರ ಪಟ್ಟಣಗಳನ್ನು ನಾಶಮಾಡುವುದಕ್ಕಿಂತ ಮೊದಲು ಆ ಸೀಮೆಯು ಯೆಹೋವನ ವನದಂತೆಯೂ, ಐಗುಪ್ತ ದೇಶದಂತೆಯೂ ನೀರಾವರಿಯ ಪ್ರದೇಶವಾಗಿತ್ತು. 11 ಆದುದರಿಂದ ಲೋಟನು ಯೊರ್ದನ್ ಹೊಳೆಯ ಸುತ್ತಣ ಪ್ರದೇಶವನ್ನು ಆರಿಸಿಕೊಂಡು ಮೂಡಣ ಕಡೆಗೆ ಹೊರಟನು.