8 ಅಬ್ರಾಮನು ಲೋಟನಿಗೆ, "ನನಗೂ, ನಿನಗೂ; ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಿರಬಾರದು. ಏಕೆಂದರೆ ನಾವು ಬಳಗದವರು. 9 ದೇಶವೆಲ್ಲಾ ನಿನ್ನ ಮುಂದೆ ಇರುತ್ತದೆಯಲ್ಲವೆ? ನಾವು ಪ್ರತ್ಯೇಕವಾಗೋಣ. ನೀನು ಎಡಕ್ಕೆ ಹೋದರೆ, ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ, ನಾನು ಎಡಕ್ಕೆ ಹೋಗುವೆನು," ಎಂದನು.
10 ಲೋಟನು ತನ್ನ ಕಣ್ಣುಗಳನ್ನೆತ್ತಿ ನೋಡಿ ಯೊರ್ದನಿನ ಮೈದಾನವನ್ನೆಲ್ಲಾ ಕಂಡನು. ಏಕೆಂದರೆ ಯೆಹೋವ ದೇವರು ಸೊದೋಮನ್ನೂ ಗೊಮೋರವನ್ನೂ ನಾಶ ಮಾಡುವುದಕ್ಕಿಂತ ಮುಂಚೆ, ಅದೆಲ್ಲಾ ಚೋಗರಿನವರೆಗೆ ನೀರಾವರಿ ಪ್ರದೇಶವಾಗಿದ್ದು, ಯೆಹೋವ ದೇವರ ತೋಟದಂತೆಯೂ ಈಜಿಪ್ಟ್ ದೇಶದಂತೆಯೂ ಇತ್ತು. 11 ಆದುದರಿಂದ ಲೋಟನು ಯೊರ್ದನಿನ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಲೋಟನು ಪೂರ್ವದಿಕ್ಕಿನ ಕಡೆಗೆ ಹೊರಟಿದ್ದರಿಂದ, ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾದರು.