3 ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. 4 ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮ ಮಾಡಿದನು, ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನು ಮೆಚ್ಚಿಕೊಂಡನು. 5 ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು, ಅವನ ಮುಖವು ಸಿಟ್ಟಿನಿಂದ ಕಳೆಗುಂದಿತು.
6 ಆಗ ಯೆಹೋವನು ಕಾಯಿನನಿಗೆ, "ನೀನು ಕೋಪಗೊಂಡಿದ್ದೇಕೆ? 7 ನಿನ್ನ ಮುಖವು ಕಳೆಗುಂದಲು ಕಾರಣವೇನು? ನೀನು ತಲೆ ತಗ್ಗಿಸಲು ಕಾರಣವೇನು? ನೀನು ಒಳ್ಳೆಯ ಕೆಲಸ ಮಾಡಿದ್ದರೆ ನಿನ್ನ ತಲೆಯು ಎತ್ತಲ್ಪಡುವುದಲ್ಲವೇ? ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು, ಅದು ನಿನ್ನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಆದರೆ ನೀನು ಅದನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕು" ಎಂದು ಹೇಳಿದನು.