ಯೇಸುವೇ ನಿಜವಾದ ದ್ರಾಕ್ಷಿಬಳ್ಳಿ
1 "ನಾನೇ ನಿಜವಾದ ದ್ರಾಕ್ಷಿಬಳ್ಳಿ, ನನ್ನ ತಂದೆ ತೋಟಗಾರನು. 2 ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ಕತ್ತರಿಸಿಹಾಕುತ್ತಾನೆ. ಫಲ ಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲ ಕೊಡುವ ಹಾಗೆ ಅದನ್ನು ಕತ್ತರಿಸಿ ಶುದ್ಧಮಾಡುತ್ತಾನೆ. 3 ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ನೀವು ಶುದ್ಧರಾಗಿದ್ದೀರಿ. 4 ನೀವು ನನ್ನಲ್ಲಿ ನೆಲೆಗೊಂಡಿರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೇ ತಾನೇ ಫಲಕೊಡಲಾರದೋ, ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. 5 ನಾನು ದ್ರಾಕ್ಷಿಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನು ಬಹಳ ಫಲ ಕೊಡುವನು. ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. 6 ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು. ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುವರು. ಅವು ಸುಟ್ಟು ಹೋಗುತ್ತವೆ. 7 15:7 ಯೋಹಾ 8:31:ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನಾದರೂ ಬೇಡಿಕೊಳ್ಳಿರಿ ಅದು ನಿಮಗೆ ದೊರೆಯುವುದು. 8 ನೀವು ಬಹಳ ಫಲಕೊಡುವುದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವುದು ಮತ್ತು ನೀವು ನನ್ನ ಶಿಷ್ಯರಾಗುವಿರಿ.