Publicidade

Jó 26

ಯೋಬನ ಒಂಭತ್ತನೆಯ ಸಂಭಾಷಣೆ: ಬಿಲ್ದನಿಗೆ ನೀಡಿದ ಪ್ರತ್ಯುತ್ತರ

1 ಆಗ ಯೋಬನು ಹೀಗೆ ಉತ್ತರಕೊಟ್ಟನು,

2 "ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು!

ಬಲಹೀನವಾದ ಕೈಗೆ ಮಹಾ ಸಹಾಯ ದೊರಕಿತು.

3 ಬುದ್ಧಿಯಿಲ್ಲದವನಿಗೆ ನೀನು ಹೇಳಿದ ಬುದ್ಧಿಯನ್ನು ಎಷ್ಟೆಂದು ಹೇಳಲಿ!

ಸುಜ್ಞಾನವನ್ನು ಧಾರಾಳವಾಗಿ ಉಪದೇಶಿಸಿದ್ದಿ!

4 ಯಾರಿಗೆ ಮಾತುಗಳನ್ನು ಕಲಿಸಿದ್ದಿ?

ನಿನ್ನಿಂದ ಹೊರಟ ನುಡಿಗಳನ್ನು ಯಾವ ಆತ್ಮವು ಪ್ರೇರೇಪಿಸಿತು?"

ಬಿಲ್ದದನ ಪ್ರತ್ಯುತ್ತರ

5 ಅದಕ್ಕೆ ಬಿಲ್ದದನು, "ಜಲಚರಗಳಿಂದ ತುಂಬಿರುವ ಸಾಗರದ ಕೆಳಗಿನ ಲೋಕದಲ್ಲಿ,

ಪ್ರೇತಗಳು ಆತನ ಭಯದಿಂದ ಯಾತನೆಪಡುವವು.

6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ,

ನಾಶಲೋಕವು ಮರೆಯಾಗಿಲ್ಲ.

7 ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ,

ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ.

8 ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು,

ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು.

9 ತನ್ನ ಸಿಂಹಾಸನಕ್ಕೆ ಮರೆಯಾಗಿ,

ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು.

10 ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ,

ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ.

11 ಆಕಾಶಮಂಡಲದ ಸ್ತಂಭಗಳು,

ಆತನ ಗದರಿಕೆಯಿಂದ ಬೆರಗಾಗಿ ಕದಲುವವು.

12 ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು;

ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು.

13 ಆತನ ಶ್ವಾಸವು ಆಕಾಶಮಂಡಲವನ್ನು ಶುಭ್ರಮಾಡುವುದು,

ಆತನ ಹಸ್ತವು ವೇಗವಾಗಿ ಓಡುವ ಸರ್ಪವನ್ನು ಇರಿಯುವುದು.

14 ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ.

ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇವೆ,

ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?"

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-