ಸಮಾಪ್ತಿ
7 ಯೆಹೋವನು ಈ ಮಾತುಗಳನ್ನು ಯೋಬನಿಗೆ ಹೇಳಿದ ಮೇಲೆ ತೇಮಾನ್ಯನಾದ ಎಲೀಫಜನನ್ನು ಕುರಿತು, "ನಿನ್ನ ಮೇಲೆಯೂ, ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀನು ಆಡಲಿಲ್ಲ. 8 ಈಗ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ದಾಸನಾದ ಯೋಬನ ಬಳಿಗೆ ಹೋಗಿ ನಿಮ್ಮ ದೋಷಪರಿಹಾರಕ್ಕಾಗಿ ಹೋಮಮಾಡಿರಿ. ನನ್ನ ದಾಸನಾದ ಯೋಬನು ನಿಮ್ಮ ಪರವಾಗಿ ಪ್ರಾರ್ಥನೆ ಮಾಡುವನು. ನಾನು ಅವನ ವಿಜ್ಞಾಪನೆಯನ್ನು ಲಾಲಿಸಿ ನಿಮ್ಮ ಮೂರ್ಖತನಕ್ಕೆ ತಕ್ಕ ದಂಡನೆಯನ್ನು ನಿಮಗೆ ವಿಧಿಸುವುದಿಲ್ಲ. ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಸತ್ಯವನ್ನು ನುಡಿದಂತೆ ನೀವು ನುಡಿಯಲಿಲ್ಲ" ಎಂದು ಹೇಳಿದನು.