ಏಲಿಯ ದುಷ್ಟ ಮಕ್ಕಳು
12 ಆದರೆ ಏಲಿಯ ಪುತ್ರರು ಯೆಹೋವ ದೇವರನ್ನು ಗೌರವಿಸದೆ ದುಷ್ಟರಾಗಿದ್ದರು. 13 ಆ ಯಾಜಕರು ಜನರನ್ನು ನಡೆಸಿದ ವಿಧ ಏನೆಂದರೆ: ಯಾವನಾದರೂ ಬಲಿ ಅರ್ಪಿಸಿದರೆ, ಆ ಅರ್ಪಿಸಿದ ಬಲಿಯ ಮಾಂಸವನ್ನು ಬೇಯಿಸುವಾಗ, ಯಾಜಕನ ಸೇವಕನು ಮೂರು ಶೂಲವುಳ್ಳ ಆಯುಧವನ್ನು ತೆಗೆದುಕೊಂಡು ಬಂದು, 14 ಅದನ್ನು ತಪ್ಪಲೆಯಲ್ಲಾಗಲಿ, ಪಾತ್ರೆಯಲ್ಲಾಗಲಿ, ಗಡಿಗೆಯಲ್ಲಾಗಲಿ ಚುಚ್ಚುವನು. ಆ ಆಯುಧದಲ್ಲಿ ಬರುವುದನ್ನೆಲ್ಲಾ ಯಾಜಕನು ತನಗೆ ತೆಗೆದುಕೊಳ್ಳುವನು. ಹೀಗೆಯೇ ಅವರು ಶೀಲೋವಿನಲ್ಲಿ ಅಲ್ಲಿಗೆ ಬರುವ ಸಮಸ್ತ ಇಸ್ರಾಯೇಲರಿಗೆ ಮಾಡಿದರು. 15 ಇದಲ್ಲದೆ ಕೊಬ್ಬನ್ನು ಬಲಿ ಅರ್ಪಿಸುವುದಕ್ಕಿಂತ ಮುಂಚೆ ಯಾಜಕನ ಸೇವಕನು ಬಂದು, ಬಲಿಯನ್ನು ಅರ್ಪಿಸುವವನ ಸಂಗಡ, "ಯಾಜಕನಿಗೆ ಸುಡುವುದಕ್ಕೆ ಮಾಂಸವನ್ನು ಕೊಡು. ಅವನು ನಿನ್ನ ಕೈಯಿಂದ ಬೆಂದ ಮಾಂಸವನ್ನು ತೆಗೆದುಕೊಳ್ಳುವುದಿಲ್ಲ. ಅದು ಹಸಿಯಾಗಿರಬೇಕು," ಎನ್ನುತ್ತಿದ್ದನು.
16 "ಮೊದಲು ಕೊಬ್ಬನ್ನು ಸುಡಲಿ, ಅನಂತರ ನಿನಗೆ ಬೇಕಾದದ್ದನ್ನು ತೆಗೆದುಕೋ," ಎಂದು ಯಾರಾದರೂ ಹೇಳಿದರೆ; ಸೇವಕನು, "ಇಲ್ಲ ಈಗಲೇ ಕೊಡು. ನೀನು ಕೊಡದಿದ್ದರೆ, ನಾನು ಒತ್ತಾಯದಿಂದ ತೆಗೆದುಕೊಳ್ಳುವೆನು," ಎನ್ನುತ್ತಿದ್ದನು.
17 ಈ ಯುವಕರ ಪಾಪವು ಯೆಹೋವ ದೇವರ ದೃಷ್ಟಿಯಲ್ಲಿ ಅಧಿಕವಾಗಿತ್ತು. ಏಕೆಂದರೆ ಅವರು ಯೆಹೋವ ದೇವರ ನೈವೇದ್ಯವನ್ನು ತುಚ್ಛವಾಗಿ ಕಂಡರು.