Pular para o conteúdo
Publicidade

1 ಸಮುಯೇಲ 27

ದಾವೀದನು ಫಿಲಿಷ್ಟಿಯರ ಮಧ್ಯದಲ್ಲಿ

1 ಆದರೆ ದಾವೀದನು ತನ್ನ ಹೃದಯದಲ್ಲಿ, "ನಾನು ಎಂದಿಗಾದರೂ ಒಂದು ದಿನ ಸೌಲನ ಕೈಯಿಂದ ಸಾಯುತ್ತೇನೆ. ನಾನು ತ್ವರೆಯಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಓಡಿ ಹೋಗುವುದಕ್ಕಿಂತ ನನಗೆ ಉತ್ತಮವಾದ ಕಾರ್ಯವಿಲ್ಲ. ಸೌಲನು ನನ್ನನ್ನು ಇಸ್ರಾಯೇಲಿನಲ್ಲಿ ಇನ್ನು ಹುಡುಕಲು ದಿಕ್ಕು ಕಾಣದೆ ಹೋಗುವನು. ಈ ಪ್ರಕಾರ ನಾನು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುವೆನು," ಎಂದುಕೊಂಡನು.

2 ಆದ್ದರಿಂದ ದಾವೀದನು ಎದ್ದು ತನ್ನ ಸಂಗಡವಿದ್ದ ಆರುನೂರು ಜನರೊಡನೆ ಗತ್ ಊರಿನ ಅರಸನಾಗಿರುವ ಮಾವೋಕನ ಮಗ ಆಕೀಷನ ಬಳಿಗೆ ಹೋದನು. 3 ದಾವೀದನು ಗತ್ ಊರಿನಲ್ಲಿ ಆಕೀಷನ ಬಳಿಯಲ್ಲಿ ತಾನೂ, ತನ್ನ ಜನರೂ ವಾಸವಾಗಿದ್ದರು. ಪ್ರತಿ ಮನುಷ್ಯನು ತನ್ನ ಮನೆಯವರ ಸಹಿತವಾಗಿಯೂ, ದಾವೀದನು ತನ್ನ ಇಬ್ಬರು ಹೆಂಡತಿಯರಾದ ಇಜ್ರೆಯೇಲಿನವಳಾದ ಅಹೀನೋವಮಳು, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳು ಸಹಿತವಾಗಿಯೂ ಇದ್ದರು. 4 ದಾವೀದನು ಗತ್ ಊರಿಗೆ ಓಡಿಹೋದನೆಂದು ಸೌಲನಿಗೆ ತಿಳಿಸಲಾಯಿತು. ಆದ್ದರಿಂದ ಅವನು ಆ ತರುವಾಯ ದಾವೀದನನ್ನು ಹುಡುಕಲಿಲ್ಲ.

5 ದಾವೀದನು ಆಕೀಷನಿಗೆ, "ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದ್ದರೆ, ಗ್ರಾಮಾಂತರಗಳಲ್ಲಿ ನಾನು ಇರುವುದಕ್ಕೆ ಒಂದು ಸ್ಥಳ ನನಗೆ ಕೊಡು. ನಿನ್ನ ದಾಸನು ಏಕೆ ನಿನ್ನ ಸಂಗಡ ರಾಜ್ಯದ ಪಟ್ಟಣದಲ್ಲಿ ಇರಬೇಕು?" ಎಂದನು.

6 ಆಗ ಆಕೀಷನು ಆ ದಿವಸದಲ್ಲಿ ಚಿಕ್ಲಗ್ ಊರನ್ನು ಅವನಿಗೆ ಕೊಟ್ಟನು. ಆದ್ದರಿಂದ ಚಿಕ್ಲಗ್ ಇಂದಿನವರೆಗೂ ಯೆಹೂದದ ಅರಸರಿಗೆ ಸೇರಿದೆ. 7 ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರ್ಷ ನಾಲ್ಕು ತಿಂಗಳು ವಾಸಿಸಿದ್ದನು.

8 ದಾವೀದನೂ, ಅವನ ಜನರೂ ಶೂರಿಗೆ ಹೋಗುವ ಮೇರೆಯಿಂದ ಈಜಿಪ್ಟಿನವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು. 9 ಆಗ ದಾವೀದನು ಪುರುಷರನ್ನಾದರೂ, ಸ್ತ್ರೀಯರನ್ನಾದರೂ ಉಳಿಸದೆ, ಆ ಸೀಮೆಯನ್ನು ಹೊಡೆದು, ಕುರಿಪಶುಗಳನ್ನೂ, ಕತ್ತೆಗಳನ್ನೂ, ಒಂಟೆಗಳನ್ನೂ, ವಸ್ತ್ರಗಳನ್ನೂ ತೆಗೆದುಕೊಂಡು ಆಕೀಷನ ಬಳಿಗೆ ತಿರುಗಿಬಂದನು.

10 ಆಗ ಆಕೀಷನು, "ಈ ಹೊತ್ತು ಎಲ್ಲಿ ಸುಲಿದುಕೊಂಡಿರಿ?" ಎಂದಾಗ ದಾವೀದನು, "ನಾವು ಯೆಹೂದದ ದಕ್ಷಿಣ ಸೀಮೆಯ ಮೇಲೆಯೂ, ಯೆರಹ್ಮೇಲ್ಯರ ದಕ್ಷಿಣ ಸೀಮೆಯ ಮೇಲೆಯೂ, ಕೇನ್ಯರ ದಕ್ಷಿಣ ಸೀಮೆಯ ಮೇಲೆಯೂ ಬಿದ್ದೆವು," ಎಂದನು. 11 ದಾವೀದನು ಗತ್ ಪಟ್ಟಣಕ್ಕೆ ಒಬ್ಬ ಪುರುಷನನ್ನಾದರೂ ಸ್ತ್ರೀಯನನ್ನಾದರೂ ಜೀವಂತವಾಗಿ ತರಲಿಲ್ಲ. ಏಕೆಂದರೆ ಯಾರಾದರೂ ಹೋಗಿ ರಾಜನಾದ ಆಕೀಷನಿಗೆ ಸತ್ಯವನ್ನು ತಿಳಿಸಬಹುದೆಂದು ದಾವೀದನು ಯೋಚಿಸಿದನು. ಅವನು ಫಿಲಿಷ್ಟಿಯರ ಸೀಮೆಯಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಇದೇ ರೀತಿ ಮಾಡುತ್ತಿದ್ದನು. 12 ಆಕೀಷನು ದಾವೀದನನ್ನು ನಂಬಿ, "ಇವನು ತನ್ನ ಜನರಾದ ಇಸ್ರಾಯೇಲರಿಗೆ ಅಸಹ್ಯವಾದನು, ಆದ್ದರಿಂದ ಇವನು ಎಂದೆಂದಿಗೂ ನನ್ನ ದಾಸನಾಗಿರುವನು," ಎಂದನು.

Estes versículos te tocaram? Ore agora!

+581 estão orando agora.

Junte-se à corrente de oração.