ಕುರಿಮರಿ ಹಾಗೂ 1,44,000 ಜನರು
1 ನಾನು ನೋಡಲಾಗಿ, ಕುರಿಮರಿ ಆಗಿರುವವರು ಚೀಯೋನ್ ಪರ್ವತದ ಮೇಲೆ ನಿಂತಿದ್ದರು. ಕುರಿಮರಿಯವರ ಜೊತೆಯಲ್ಲಿ ಒಂದು ಲಕ್ಷ ನಲವತ್ನಾಲ್ಕು ಸಾವಿರ ಮಂದಿ ಇದ್ದರು. ಅವರ ಹಣೆಯ ಮೇಲೆ ಕುರಿಮರಿಯವರ ಹೆಸರೂ ಕುರಿಮರಿಯವರ ತಂದೆಯ ಹೆಸರೂ ಬರೆಯಲಾಗಿದ್ದವು. 2 ಇದಲ್ಲದೆ ಪರಲೋಕದಿಂದ ಜಲ ಪ್ರವಾಹದಂತೆಯೂ ಮಹಾ ಗುಡುಗಿನ ಶಬ್ದದಂತೆಯೂ ಇದ್ದ ಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ಕಿನ್ನರಿಗಳನ್ನು ನುಡಿಸುತ್ತಿರುವ ಕಿನ್ನರರ ಶಬ್ದದಂತಿತ್ತು. 3 ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸಹಾಡನ್ನು ಹಾಡಿದರು. ಭೂಲೋಕದೊಳಗಿಂದ ಕೊಂಡುಕೊಳ್ಳಲಾದ ಆ ಒಂದು ಲಕ್ಷ ನಲವತ್ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು. 4 ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ. ಏಕೆಂದರೆ ಇವರು ಕನ್ಯೆಯರಂತೆ ನಿಷ್ಕಳಂಕರು. ಕುರಿಮರಿ ಆಗಿರುವವರು ಹೋದಡೆಯಲ್ಲೆಲ್ಲಾ ಅವರ ಹಿಂದೆ ಹೋಗುವವರು ಇವರೇ. ಇವರು ಮನುಷ್ಯರೊಳಗಿಂದ ಕೊಂಡುಕೊಳ್ಳಲಾಗಿ ದೇವರಿಗೂ ಕುರಿಮರಿಯಾಗಿರುವವರಿಗೂ ಪ್ರಥಮಫಲದಂತಾದರು. 5 ಇವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ. ಇವರು ನಿರ್ದೋಷಿಗಳಾಗಿದ್ದಾರೆ.