Publicidade

Apocalipse 15

ಏಳುಮಂದಿ ದೂತರು, ಏಳು ಉಪದ್ರವಗಳು

1 ನಾನು ಪರಲೋಕದಲ್ಲಿ ಆಶ್ಚರ್ಯಕರವಾದ ಮತ್ತೊಂದು ಮಹಾ ಚಿಹ್ನೆಯನ್ನು ಕಂಡೆನು. ಏಳುಮಂದಿ ದೂತರಲ್ಲಿ ಕಡೆಯ ಏಳು ಉಪದ್ರವಗಳಿದ್ದವು. ಏಕೆಂದರೆ, ಅವುಗಳಲ್ಲಿ ದೇವರ ಕೋಪವು ಸಂಪೂರ್ಣವಾಗುವುದು. 2 ನನಗೆ ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಒಂದು ಕಾಣಿಸಿತು. ಆಗ ಮೃಗದ ಮೇಲೆಯೂ ಅದರ ವಿಗ್ರಹದ ಮೇಲೆಯೂ ಅದರ ಹೆಸರಿನ ಸಂಖ್ಯೆಯ ಮೇಲೆಯೂ ಜಯಹೊಂದಿದವರು ದೇವರ ಕಿನ್ನರಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಗಾಜಿನ ಸಮುದ್ರದ ಮೇಲೆ ನಿಂತುಕೊಂಡು, 3 ದೇವರ ದಾಸನಾದ ಮೋಶೆಯ ಮತ್ತು ಕುರಿಮರಿ ಆಗಿರುವವರ ಹಾಡನ್ನೂ ಹಾಡುತ್ತಾ:

"ಕರ್ತ ಆಗಿರುವ ಸರ್ವಶಕ್ತ ದೇವರೇ,

ನಿಮ್ಮ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯವಾದವುಗಳೂ ಆಗಿವೆ.

ರಾಷ್ಟ್ರಗಳ ಅರಸರಾಗಿರುವ

ನಿಮ್ಮ ಮಾರ್ಗಗಳು ನೀತಿಯುಳ್ಳವೂ ಸತ್ಯವೂ ಆಗಿವೆ.

4 ಕರ್ತನೇ, ನಿನಗೆ ಭಯಪಡದವರೂ

ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರು?

ಏಕೆಂದರೆ ನೀನೊಬ್ಬನೇ ಪರಿಶುದ್ಧನು.

ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಟವಾದ್ದರಿಂದ

ಎಲ್ಲಾ ರಾಷ್ಟ್ರಗಳವರು ಬಂದು,

ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು,"

ಎಂದು ಹೇಳಿದರು.

5 ಇದಾದ ಮೇಲೆ ನಾನು ನೋಡಿದಾಗ, ಪರಲೋಕದಲ್ಲಿರುವ ಸಾಕ್ಷಿಯ ಗುಡಾರದ ದೇವಾಲಯವು ತೆರೆದಿರುವುದನ್ನು ಕಂಡೆನು. 6 ಆ ದೇವಾಲಯದೊಳಗಿಂದ ಏಳು ಉಪದ್ರವಗಳನ್ನು ಹಿಡಿದು, ಆ ಏಳು ದೇವದೂತರು ಬಂದರು. ಅವರು ಪ್ರಕಾಶಮಯವಾದ ಶುಭ್ರವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು. ತಮ್ಮ ಎದೆಗಳಿಗೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು. 7 ನಾಲ್ಕು ಜೀವಿಗಳಲ್ಲಿ ಒಂದು, ಆ ಏಳು ದೂತರಿಗೆ, ಯುಗಯುಗಾಂತರಗಳಲ್ಲಿಯೂ ಜೀವಿಸುವವರಾದ ದೇವರ ಕೋಪದಿಂದ ತುಂಬಿದ್ದ ಏಳು ಚಿನ್ನದ ಬೋಗುಣಿಗಳನ್ನು ಕೊಟ್ಟಿತು. 8 ದೇವರ ಮಹಿಮೆಯಿಂದಲೂ ಅವರ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ದೇವಾಲಯವು ಆವರಿಸಿದ ಕಾರಣ, ಆ ಏಳುಮಂದಿ ದೇವದೂತರ ಏಳು ಉಪದ್ರವಗಳು ತೀರುವ ತನಕ, ಆ ದೇವಾಲಯದೊಳಗೆ ಪ್ರವೇಶಿಸುವುದಕ್ಕೆ ಯಾರಿಗೂ ಆಗಲಿಲ್ಲ.

Veja também

Publicidade
Bíblia Online Bíblia Online

Bíblia Online • Versão: 2026-06-16_18-40-07-