ಸತ್ತವರ ಪುನರುತ್ಥಾನ ಮತ್ತು ನ್ಯಾಯತೀರ್ಪು
11 ಆಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನು ಕಂಡೆನು. ಅದರ ಮೇಲೆ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ಓಡಿಹೋಗಿ ಸ್ಥಳ ಕಾಣಿಸದಂತಾದವು. 12 ಇದಲ್ಲದೆ ಸತ್ತವರಾದ ಹಿರಿಯರೂ ಕಿರಿಯರೂ ಸಿಂಹಾಸನದ ಎದುರಿಗೆ ನಿಂತಿರುವುದನ್ನೂ ಕಂಡೆನು. ಆಗ ಪುಸ್ತಕಗಳನ್ನು ತೆರೆಯಲಾಯಿತು. ನಿತ್ಯಜೀವ ಪುಸ್ತಕವೆಂಬ ಇನ್ನೊಂದು ಪುಸ್ತಕವನ್ನು ತೆರೆಯಲಾಯಿತು. ಆ ಪುಸ್ತಕಗಳಲ್ಲಿ ಬರೆದಿದ್ದರ ಪ್ರಕಾರ, ಅವರವರ ಕ್ರಿಯೆಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು. 13 ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಮೃತ್ಯುವು, ಪಾತಾಳವು ತಮ್ಮಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕ್ರಿಯೆಗಳ ಪ್ರಕಾರ ನ್ಯಾಯತೀರ್ಪಾಯಿತು. 14 ಆಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲಾದವು. ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. 15 ಯಾರ ಹೆಸರು ಜೀವ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವರನ್ನು ಬೆಂಕಿಯ ಕೆರೆಗೆ ದೊಬ್ಬಲಾಯಿತು.